ಮುಂಬೈ: ಮುಂಬೈ ಪೊಲೀಸರು ‘ನಿರ್ಭಯಾ ನಿಧಿ’ ಬಳಸಿ ಖರೀದಿಸಿದ್ದ ವಾಹನಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕರು ಮತ್ತು ಸಂಸದರ ವೈ ಪ್ಲಸ್ ಭದ್ರತೆಗೆ ಬಳಕೆ ಮಾಡಲಾಗುತ್ತಿದೆ ಎಂದು ಭಾನುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳೆಯರ ವಿರುದ್ಧದ ಅಪರಾಧಗಳ ತಡೆ ಉದ್ದೇಶದಿಂದ ನಿರ್ಭಯಾ ನಿಧಿಯಡಿಯಲ್ಲಿ ಕಳೆದ ವರ್ಷ ಜೂನ್‌ನಲ್ಲಿ 255 ಕಾರುಗಳು, 513 ಬೈಕ್‌ಗಳನ್ನು ಖರೀದಿಸಲಾಗಿತ್ತು.ಈ ಪೈಕಿ 47 ಬೊಲೆರೊ ವಾಹನಗಳನ್ನು ಶಾಸಕರು ಮತ್ತು ಸಂಸದರ ಭದ್ರತೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಬಳಿಕ 17 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಮಹಿಳೆಯರ ಸುರಕ್ಷತೆಗಿಂತ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳಿಗೆ ಭದ್ರತೆ ನೀಡುವುದೇ ಹೆಚ್ಚು ಮುಖ್ಯವೇ ಎಂದು ಪ್ರಶ್ನಿಸಿವೆ. ಕೂಡಲೇ ಎಲ್ಲ ವಾಹನಗಳನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿವೆ.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ 2013ರಿಂದ ರಾಜ್ಯ ಸರ್ಕಾರಗಳಿಗೆ ಅನುದಾನ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.