ಉಜ್ಜಯಿನಿ: ತನ್ನ ಅಂಗಡಿಯಲ್ಲಿಯೇ ಪ್ರಸಾದ ಕೊಳ್ಳಬೇಕು ಎಂದು ಒತ್ತಾಯಿಸಿ, ಮುಂಬೈನ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಜ್ಜಯಿನಿಯ ವ್ಯಾಪಾರಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಕಾಳಭೈರವ ದೇವಸ್ಥಾನದ ಎದುರು ನಡೆದ ಈ ಪ್ರಕರಣದ ಆರೋಪಿಯನ್ನು ರಾಜಾ ಭಾಟಿ ಎಂದು ಗುರುತಿಸಿರುವುದಾಗಿ ಪೊಲೀಸ್ ಸೂಪರಿಂಟೆಂಡೆಂಟ್ ಪ್ರದೀಪ್ ಶರ್ಮ ತಿಳಿಸಿದರು.
ವಾಹನವನ್ನು ಅಂಗಡಿಯ ಮುಂದೆ ನಿಲ್ಲಿಸಿದ್ದರಿಂದ ತನ್ನ ಅಂಗಡಿಯಲ್ಲೇ ಪ್ರಸಾದ ತೆಗೆದುಕೊಳ್ಳಬೇಕು ಎಂದು ರಾಜಾ ಭಾಟಿ ಮುಂಬೈನಿಂದ ಬಂದಿದ್ದ ಮೂವರು ಭಕ್ತರನ್ನು ಒತ್ತಾಯಿಸಿದರು. ಇದು ಪರಸ್ಪರರ ನಡುವೆ ಹಲ್ಲೆಗೆ ಕಾರಣವಾಗಿ, ನಾಲ್ವರೂ ಗಾಯಗೊಂಡರು. ಮುಂಬೈನ ರಿಶಿ ಭಟ್ಟಾಚಾರ್ಯ ಎಂಬವರು ನೀಡಿದ ದೂರಿನ ಮೇಲೆ ಹಲ್ಲೆ, ಅಶ್ಲೀಲ ಪದಗಳ ಬಳಕೆ ಹಾಗೂ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ಪ್ರದೀಪ್ ಶರ್ಮ ಮಾಹಿತಿ ನೀಡಿದರು.
ದೇವಸ್ಥಾನದ ಹತ್ತಿರದಲ್ಲಿ ಅಕ್ರಮ ಅಂಗಡಿಗಳಿದ್ದು, ಆ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ಭೈರವಗಢದ ಪೊಲೀಸ್ ಠಾಣೆಯ ಉಸ್ತುವಾರಿ ಜಗದೀಶ್ ಗೋಯಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.