ವಿಶಾಖಪಟ್ಟಣಂ: ನಮ್ಮ ದೇಶದ ಮೇಲೆ ದಾಳಿ ನಡೆಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನಾವು ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ. ಯಾರ ಮೇಲೂ ನಡೆಸುವುದಿಲ್ಲ ಎಂಬ ಭರವಸೆಯನ್ನು ನೀಡುತ್ತೇವೆ. ಆದರೆ ಯಾರಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ಅವರು ಬದುಕಿನಲ್ಲಿ ಮರೆಯಲಾಗದಂತ ಉತ್ತರವನ್ನು ನಾವು ನೀಡುತ್ತೇವೆ. ನಾವು ಯುದ್ದೋನ್ಮಾದಿಗಳಲ್ಲ.ನಾವು ಶಾಂತಿ ಪ್ರಿಯ ಪ್ರಜೆಗಳು ಎಂಬುದನ್ನು ನಾನು ಒತ್ತಿ ಹೇಳುತ್ತಿದ್ದೇನೆ ಎಂದಿದ್ದಾರೆ ನಾಯ್ಡು.
ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂಬ ಸರ್ಕಾರದ ನಿಲುವು ಬೆಂಬಲಿಸಿದ ನಾಯ್ಡು, ಪಾಕಿಸ್ತಾನ ಉಗ್ರರಿಗೆ ತರಬೇತಿ ಮತ್ತು ಹಣ ಪೂರೈಕೆ ಮಾಡುತ್ತಿದೆ. ನಾವು ಯಾರೊಬ್ಬರ ಆಂತರಿಕ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಹಾಗೆಯೇ ಕಾಶ್ಮೀರ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡುವುದನ್ನು ನಾವು ಬಯಸುವುದಿಲ್ಲ. ಕಾಶ್ಮೀರದ ಬಗ್ಗೆ ಚರ್ಚಿಸಲು ಏನಿದೆ?. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದಿದ್ದಾರೆ.
ಭಾರತ ಬೇರೆ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ. ಎಲ್ಲ ಟಾಮ್, ಡಿಕ್ ಮತ್ತು ಹ್ಯಾರಿ ಇಲ್ಲಿಗೆ ಬಂದು ದಾಳಿ ನಡೆಸಿದರು. ನಮ್ಮಲ್ಲಿ ಆಳ್ವಿಕೆ ನಡೆಸಿದರು. ನಮ್ಮನ್ನು ಹಾನಿಗೊಳಿಸಿದರು, ಲೂಟಿ ಮಾಡಿದರು, ಮೋಸ ಮಾಡಿದರು. ನಮ್ಮ ಮನಸ್ಸನ್ನೂ ವಂಚಿಸಿದರು.
ನಮ್ಮ ನೆರೆರಾಷ್ಟ್ರವೊಂದು ಉಗ್ರರ ತರಬೇತಿಗಾಗಿ ನಿರಂತರ ಸಹಾಯ ಮಾಡುತ್ತಲೇ ಇದೆ. ಇದು ಮಾನವೀಯತೆಗೆ ಧಕ್ಕೆಯನ್ನುಂಟು ಮಾಡುವ ಕೆಲಸ ಎಂಬುದನ್ನು ಅರಿಯದೆಯೇ ಅವರು ಈ ರೀತಿ ಮಾಡುತ್ತಿದ್ದಾರೆ. ಅದೇ ವೇಳೆ ಮುಂಬರುವ ದಿನಗಳಲ್ಲಿ ಅವರು ಮಾಡಿರುವ ಹಾನಿ ಅವರಿಗೆ ತಿರುಗುಬಾಣವಾಗಲಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ನಾಯ್ಡು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.