ನವದೆಹಲಿ: ಸಲಿಂಗಕಾಮ ಅಪರಾಧ ಎಂಬ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 377ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡುವ ಸಾಧ್ಯತೆ ಇದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಲಿದೆ.
ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಜುಲೈನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಇದನ್ನೂ ಓದಿ:ಸಲಿಂಗಕಾಮ ಅಡ್ಡದಾರಿಯಲ್ಲ:ಸುಪ್ರೀಂ
ಸೆಕ್ಷನ್ 377 ಏನೆನ್ನುತ್ತದೆ?
ಸೆಕ್ಷನ್ 377, ನಿಸರ್ಗ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ನಿಸರ್ಗ ವಿರುದ್ಧವಾಗಿ ಸ್ವಯಂಪ್ರೇರಣೆಯಿಂದ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಈ ಸೆಕ್ಷನ್ ಹೇಳುತ್ತದೆ. ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.
ಕಾನೂನು ಹೋರಾಟದ ಹಾದಿ...
ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಿ 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. 2013ರ ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಸಲಿಂಗಕಾಮದ ವಿರುದ್ಧ ಹೇರಲಾಗಿರುವ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಅದೇ ವರ್ಷ ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಮನವಿಯನ್ನು 2014ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತ್ತು. ನಂತರ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ, ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿತ್ತು. ವಯಸ್ಕರಿಬ್ಬರ ನಡುವೆ ಸಮ್ಮತಿಯ ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ 2013ರ ತನ್ನ ತೀರ್ಪನ್ನು ಮರುಪರಿಶೀಲಿಸಲು 2018ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.