ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆಯುವ ಪಂಬನ್ ಸೀ ಬ್ರಿಡ್ಜ್‌ನ ಸದೃಢತೆ ಪರೀಕ್ಷಿಸುವ ಆಸಿಲೇಷನ್ ಮಾನಿಟರಿಂಗ್ ಸಿಸ್ಟಂ (ಒಎಸ್ಎಂ) ಎಂಜಿನ್ ಯಶಸ್ವಿಯಾಗಿ ಸಂಚರಿಸಿದೆ.
ಪಾಕ್ (Palk) ಜಲಸಂಧಿ ಎಂದೇ ಗುರುತಿಸಲಾಗುವ ಮಂಡಪಂ ಹಾಗೂ ಪಂಬನ್ ರೈಲು ನಿಲ್ದಾಣಗಳ ನಡುವೆ ಈ ವಿಶಿಷ್ಟ ಸೇತುವೆ ನಿರ್ಮಿಸಲಾಗಿದೆ. ಪರೀಕ್ಷೆಯಲ್ಲಿ ಮಂಡಪಮ್‌ನಿಂದ ರಾಮೇಶ್ವರಂವರೆಗೆ ರೈಲು ಪ್ರತಿ ಗಂಟೆಗೆ 121 ಕಿ.ಮೀ. ವೇಗದಲ್ಲಿ ಸಂಚರಿಸಿತು. ಸೇತುವೆ ಮೇಲೆ ಇದರ ವೇಗ 80 ಕಿ.ಮೀ. ಇತ್ತು. ಒಟ್ಟು ಮೂರು ಬೋಗಿಗಳನ್ನು ಒಳಗೊಂಡ ಸರಕು ಸಾಗಣೆ ರೈಲು ಇದಾಗಿತ್ತು.
ಪರೀಕ್ಷಾರ್ಥ ಪ್ರಯೋಗದಲ್ಲಿ ಮಧುರೈ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಲ್.ಎನ್.ರಾವ್ ಹಾಗೂ ಉತ್ತರ ವಲಯದ ವಿಭಾಗೀಯ ಎಂಜಿನಿಯರ್ ಸಂದೀಪ್ ಭಾಸ್ಕರ್ ಹಾಗೂ ಇತರ ಅಧಿಕಾರಿಗಳು ಇದ್ದರು. ಮತ್ತೊಂದು ಪರೀಕ್ಷಾರ್ಥ ಸಂಚಾರವು ನ. 13ರಂದು ನಡೆಯಲಿದ್ದು, ಬೆಂಗಳೂರಿನಲ್ಲಿರುವ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತೆ ಆಯುಕ್ತ ಎ.ಎಂ. ಚೌಧರಿ ಪರಿಶೀಲನೆ ನಡೆಸಲಿದ್ದಾರೆ. ಮತ್ತೊಂದು ಪರೀಕ್ಷೆ ನ. 14ರಂದು ನಡೆಯಲಿದೆ ಎಂದು ವರದಿಯಾಗಿದೆ.
ಸೇತುವೆಯ ಒಟ್ಟು ಉದ್ದ 2.2 ಕಿ.ಮೀ. ಇದೆ. ಇದು ಮಂಡಪಂ ನಗರ ಹಾಗೂ ಪಂಬನ್ ದ್ವೀಪವನ್ನು ಸಂಪರ್ಕಿಸುತ್ತದೆ. ಇದೇ ಮಾರ್ಗದಲ್ಲಿ ಶತಮಾನದ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಸೇತುವೆಗೆ ಬದಲಾಗಿ ಈ ನೂತನ ಸೇತುವೆ ನಿರ್ಮಿಸಲಾಗಿದೆ. ಹಳೇ ಸೇತುವೆಗೆ 2022ರಲ್ಲಿ ನಿವೃತ್ತಿ ಘೋಷಿಸಲಾಯಿತು. ರೈಲ್ ವಿಕಾಸ್ ನಿಗಮ ಲಿ. (RVNL) ಈ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಿದೆ.
ರೈಲು ಸಂಚಾರದ ವೇಳೆ ಸೇತುವೆಯಾಗುವ ಹಾಗೂ ಹಡಗು ಸಂಚಾರದ ಸಂದರ್ಭದಲ್ಲಿ ಲಂಬವಾಗಿ ಮೇಲಕ್ಕೇರಿ ದಾರಿ ಮಾಡುವ ಮೂಲಕ ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸೇತುವೆ ಇದಾಗಿದೆ. 72.5 ಮೀಟರ್ ಎತ್ತರಕ್ಕೆ ತೆರೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಉತ್ತರದ ಬದರಿನಾಥ, ದಕ್ಷಿಣ ರಾಮೇಶ್ವರಂ, ಪೂರ್ವದ ಪುರಿ ಹಾಗೂ ಪಶ್ಚಿಮದ ದ್ವಾರಕಾ ಸಂಪರ್ಕಿಸುವ ರೈಲು ಮಾರ್ಗ ಸಂಪರ್ಕಿಸುವಲ್ಲಿ ದಕ್ಷಿಣದ ಈ ಸೇತುವೆ ಪ್ರಮುಖ ಪಾತ್ರ ವಹಿಸುತ್ತದೆ ಎಂದೇ ಹೇಳಲಾಗುತ್ತಿದೆ. ಈ ಮಾರ್ಗದಲ್ಲಿ ಡಿಸೆಂಬರ್‌ನಿಂದ ರೈಲು ಸಂಚಾರ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.