ನವದೆಹಲಿ: ವೈಷ್ಣೋ ದೇವಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ.
‘ಮಾತಾ ವೈಷ್ಣೋ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಘೋರ ದುರಂತವಾಗಿದೆ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ’ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಶೀಘ್ರ ಗಾಯಾಳುಗಳ ಚೇತರಿಕೆಗೆ ಹಾರೈಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
‘ಮಾತಾ ವೈಷ್ಣೋದೇವಿ ಭವನದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ತುಂಬಾ ದುಃಖವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಹಾರೈಸುತ್ತೇನೆ’ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಂತಾಪ
ವೈಷ್ಣೋ ದೇವಿಯದೇಗುಲದಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ತೀವ್ರ ದುಃಖವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಬಗ್ಗೆ ನನ್ನ ಹೃದಯ ಮಿಡಿಯುತ್ತಿದೆ.ಅಲ್ಲದೆ ಕಾಲ್ತುಳಿತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಅಧಿಕ ಪ್ರಮಾಣದ ಭಕ್ತರಿಂದ ತುಂಬಿದ್ದ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋ ದೇವಿ ಮಂದಿರದಲ್ಲಿ ಮಧ್ಯರಾತ್ರಿ 2.45ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ದುರ್ಘಟನೆಯಲ್ಲಿ 12 ಮಂದಿ ಮೃತಪಟ್ಟು, 13 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.