ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥ ನಾಪತ್ತೆ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಕಾಫಿ ಡೇ ಷೇರುಗಳು ಶೇ 20ರಷ್ಟು ಕುಸಿತ ಕಂಡಿವೆ. ಸಾಲದ ಸುಳಿಗೆ ಸಿಲುಕಿರುವ ಕೆಫೆ ಕಾಫಿ ಡೇ ಕಂಪನಿಯ ಭವಿಷ್ಯದ ಬಗ್ಗೆ ಕಾರ್ಮಿಕರಲ್ಲಿ ಮತ್ತು ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ.ಸಿದ್ದಾರ್ಥ ಅವರು ತಮ್ಮ ಕಂಪನಿಯ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಪ್ರಕಾರ ಕಂಪನಿಯ ಸಾಲಕ್ಕಿಂತ ಅವರ ಆಸ್ತಿಯ ಮೌಲ್ಯ ಹೆಚ್ಚು. ಹೀಗಾಗಿ ನಿಧಾನವಾಗಿ ಕಂಪನಿ ಚೇತರಿಸಿಕೊಳ್ಳಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳನ್ನು ಹೊಂದಿದ್ದ ಸಿದ್ದಾರ್ಥ ಪ್ರತಿ ವರ್ಷ ಸುಮಾರು 28 ಸಾವಿರ ಟನ್ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. 2000 ಟನ್ ಕಾಫಿಯನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿದ್ದರು. ಸಿದ್ದಾರ್ಥ ಅವರ ಒಡೆತನದಲ್ಲಿ 12,000 ಎಕರೆ ಕಾಫಿ ತೋಟ ಇತ್ತು. ಇದರ ಜೊತೆಗೆ ಕೆಫೆ ಕಾಫಿ ಡೇ ಮೂಲಕ ದೇಶ ವಿದೇಶಗಳಲ್ಲಿ ಕಾಫಿ ವ್ಯಾಪಾರ ಮಾಡುತ್ತಿದ್ದರು. 1996ರಲ್ಲಿ ಆರಂಭವಾದ ಕೆಫೆ ಕಾಫಿ ಡೇ ದೇಶದ 243 ನಗರಗಳಲ್ಲಿ 1,751 ಔಟ್‌ಲೆಟ್‌ಗಳನ್ನು ಹೊಂದಿದೆ. 2019ರ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1, 2018ರಿಂದ ಮಾರ್ಚ್ 31, 2019ರವರೆಗೆ) ಕಂಪನಿಯ ವಹಿವಾಟಿನ ಒಟ್ಟು ಮೊತ್ತ ₹4,466.70 ಕೋಟಿ. ಗಳಿಸಿದ್ದ ಲಾಭ ₹127.51 ಕೋಟಿ.
ಕಳೆದ ಒಂದು ವರ್ಷದಿಂದ ಸಾಲದ ಪ್ರಮಾಣ ಹೆಚ್ಚಾಗಿದ್ದು ಸಿದ್ದಾರ್ಥ ಅವರಿಗೆ ಸಮಸ್ಯೆ ತಂದೊಡ್ಡಿತು. ‘ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದಲೇ ಮೈಂಡ್ ಟ್ರೀ ಕಂಪನಿಯಲ್ಲಿದ್ದ ಶೇ20ರಷ್ಟು ಷೇರುಗಳನ್ನು ಎಲ್‌ಅಂಡ್‌ಟಿ ಕಂಪನಿಗೆ ₹3269 ಕೋಟಿಗೆ ಮಾರಾಟ ಮಾಡಿದರು. ಮೈಂಡ್ ಟ್ರೀ ಕಂಪನಿಯ ಬಗ್ಗೆ ಸಿದ್ದಾರ್ಥ ಅವರಿಗೆ ಭಾವುಕ ನಂಟು ಇತ್ತು. ಅದರ ಷೇರುಗಳನ್ನು ಮಾರಿದ್ದು ಅವರ ಜೀವನದ ಕಠಿಣ ನಿರ್ಧಾರಗಳಲ್ಲಿ ಒಂದು’ ಎಂದು ಸಿದ್ದಾರ್ಥ ಅವರಿಗೆ ಆಪ್ತರಾಗಿದ್ದವರು ಹೇಳುತ್ತಾರೆ. ಷೇರು ಮಾರಾಟದಿಂದ ಬಂದ ಸಂಪೂರ್ಣ ಮೊತ್ತವನ್ನು ಬ್ಯಾಂಕುಗಳಿಗೆ ಕಟ್ಟಿದರು. ಸಾಲದ ಒಟ್ಟು ಮೊತ್ತವು ಮಾರ್ಚ್ 2019ರ ಹೊತ್ತಿಗೆ ₹2,657 ಕೋಟಿಗೆ ಇಳಿಯಿತು. ವರ್ಷದ ಹಿಂದೆ ಅವರ ಸಾಲದ ಮೊತ್ತ ₹3192.56 ಕೋಟಿ ಇತ್ತು.
ಇದನ್ನೂ ಓದಿ:ಕಾಫಿ ಡೇ ಷೇರು ಶೇ 20ರಷ್ಟು ಕುಸಿತ
ಸಿದ್ದಾರ್ಥ ಅವರ ಬ್ಯಾಲೆನ್ಸ್ ಶೀಟ್ ನೋಡಿದರೆ ಒಂದು ವರ್ಷದಲ್ಲಿ ಅವರ ಸಾಲ ನಾಲ್ಕು ಪಟ್ಟು ಹೆಚ್ಚಾಗಿದ್ದು ತಿಳಿಯುತ್ತದೆ. ಕಾಫಿ ಡೇ ಕಂಪನಿಯ ಅಲ್ಪಾವಧಿ ಸಾಲವು ವರ್ಷದ ಹಿಂದೆ ₹810.91 ಕೋಟಿ ಇತ್ತು. ಪ್ರಸ್ತುತ ಅದು ₹3,889 ಕೋಟಿ ತಲುಪಿತ್ತು.
ಕಳೆದ ಕೆಲ ತಿಂಗಳುಗಳಿಂದ ಅವರ ಮೇಲೆ ರಾಜಕೀಯ ಒತ್ತಡ ಮತ್ತು ಆರ್ಥಿಕ ಸಂಕಷ್ಟ ಎದುರಾಗಿತ್ತು ಎಂದು ಅವರ ಜೊತೆಗೆ ಕೆಲಸ ಮಾಡಿದವರು ಹೇಳುತ್ತಾರೆ. ಬೆಂಗಳೂರಿನ ವಿವಿಧೆಡೆ ಇರುವ ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.