ನವದೆಹಲಿ: ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯಿಂದ ‘ಒಂದು ಮಗು ನೀತಿ’ಗೆ ಸಂಬಂಧಿತ ಅಂಶ ಕೈಬಿಡುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಉತ್ತರ ಪ್ರದೇಶ ಸರ್ಕಾರಕ್ಕೆ ಸಲಹೆ ಮಾಡಿದೆ.
ಒಂದು ಮಗು ನೀತಿಯು ಜನಸಂಖ್ಯೆಯನ್ನು ಸ್ಥಿರವಾಗಿಸುವುದರ ಜೊತೆಗೆ ರಾಜ್ಯದಲ್ಲಿ ವಿವಿಧ ಸಮುದಾಯಗಳ ನಡುವೆ ಅಸಮತೋಲನಕ್ಕೂ ಕಾರಣವಾಗಬಹುದು ಎಂದೂ ವಿಎಚ್‌ಪಿ ಪ್ರತಿಪಾದಿಸಿದೆ.
ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಕಾಯ್ದೆಯಿಂದ ಪೋಷಕರ ಬದಲಿಗೆ ಮಗುವಿಗೆ ದಂಡನೆ ನೀಡುವ ‘ಅಸಮಂಜಸ’ ಅಂಶವನ್ನೂ ತೆಗೆಯಬೇಕು ಎಂದೂ ವಿಎಚ್‌ಪಿ ಸಲಹೆ ಮಾಡಿದೆ.
‘ಕರಡು ಮಸೂದೆಯ ಪೀಠಿಕೆಯಂತೆ, ಉದ್ದೇಶಿತ ಕಾಯ್ದೆಯು ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಎರಡು ಮಕ್ಕಳ ನೀತಿಗೆ ಉತ್ತೇಜನ ನೀಡಲಿದೆ. ಈ ಎರಡೂ ಅಂಶಗಳಿಗೆವಿಶ್ವ ಹಿಂದೂ ಪರಿಷತ್ ಸಮ್ಮತಿಯಿದೆ’ ಎಂದು ವಿಎಚ್‌ಪಿಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಹೇಳಿದರು.
ಆದರೆ, ‘ಸರ್ಕಾರಿ ನೌಕರರು ಮತ್ತು ಅನ್ಯರು ಕುಟುಂಬದಲ್ಲಿ ಒಂದೇ ಮಗು ಹೊಂದಬೇಕು ಎಂದು ಉತ್ತೇಜನ ನೀಡುವ, ಕರಡು ಮಸೂದೆಯ ಸೆಕ್ಷನ್ 5, 6 (2) ಮತ್ತು 7 ಅಂಶಗಳು ಉದ್ದೇಶಕ್ಕೆ ಹೊರತಾಗಿವೆ. ಹೀಗಾಗಿ, ಸೆಕ್ಷನ್ 5 ಹಾಗೂ ಪೋಷಕರ ಬದಲಿಗೆ ಮಗುವಿಗೆ ದಂಡನೆ ನೀಡುವ ಅಂಶ ಕೈಬಿಡಬೇಕು‘ ಎಂದು ಹೇಳಿದರು.
ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಕರಡು ಮಸೂದೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.