ADVERTISEMENT

ಅಯೋಧ್ಯೆ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ: ಯೋಗಿಗೆ ವಿಎಚ್‌ಪಿ ದೂರು

ಪಿಟಿಐ
Published 31 ಡಿಸೆಂಬರ್ 2023, 10:41 IST
Last Updated 31 ಡಿಸೆಂಬರ್ 2023, 10:41 IST
ರಾಮ ಮಂದಿರ
ರಾಮ ಮಂದಿರ   

ನವದೆಹಲಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಹೆಸರಿನಲ್ಲಿ ಕೆಲವರು ಯಾವುದೇ ಅನುಮೋದನೆ ಪಡೆಯದೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರಕ್ಕೆ ದೂರು ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ಹೇಳಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಪ್ರಯತ್ನಿಸಲಾಗುತ್ತಿದೆ. ಅವರ ಬಲೆಗೆ ಬೀಳದಂತೆ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜನರನ್ನು ಎಚ್ಚರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರತಿಯನ್ನು ಸಿಎಂ ಆದಿತ್ಯನಾಥ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

‘ಎಚ್ಚರ! ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಕಲಿ ಗುರುತಿನ ಚೀಟಿ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಬನ್ಸಾಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ನಾವು ಉತ್ತರ ಪ್ರದೇಶ ಡಿಜಿಪಿ, ಲಖನೌ ವಲಯ ಐಜಿಗೆ ಔಪಚಾರಿಕ ದೂರು ನೀಡಿದ್ದೇವೆ ಎಂದು ಬನ್ಸಾಲ್ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಣವನ್ನು ಸಂಗ್ರಹಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಇತ್ತೀಚೆಗೆ ಹೇಳಿತ್ತು.

ಶ್ರೀರಾಮ ದೇಗುಲದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ನಿಧಿ ಸಂಗ್ರಹಿಸಲು, ಪ್ರತ್ಯೇಕ ಸಮಿತಿ ರಚಿಸಲು ಮತ್ತು ರಶೀದಿಗಳನ್ನು ಮುದ್ರಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.