ADVERTISEMENT

₹100 ಕೋಟಿ ಪರಿಹಾರ: ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್

ಪಿಟಿಐ
Published 6 ಮೇ 2023, 14:56 IST
Last Updated 6 ಮೇ 2023, 14:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿರುವ ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ), ₹ 100 ಕೋಟಿ ಪರಿಹಾರ ನೀಡುವಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಕೀಲರ ಮೂಲಕ ನೋಟಿಸ್‌ ಜಾರಿಗೊಳಿಸಿದೆ.

ವಿಎಚ್‌ಪಿ ಹಾಗೂ ಬಜರಂಗದಳದ ಚಂಡೀಗಢ ಘಟಕಗಳು ಈ ನೋಟಿಸ್‌ ನೀಡಿವೆ. ವಿಎಚ್‌ಪಿ ಪರ ವಕೀಲ ಹಾಗೂ ಸಂಘಟನೆಯ ಕಾನೂನು ಘಟಕದ ಉಪಾಧ್ಯಕ್ಷ ಸಾಹಿಲ್ ಬನ್ಸಲ್ ಈ ನೋಟಿಸ್‌ ನೀಡಿದ್ದು, 14 ದಿನಗಳ ಒಳಗಾಗಿ ಪರಿಹಾರಧನ ನೀಡುವಂತೆ ಸೂಚಿಸಿದ್ದಾರೆ.

ಈ ಕುರಿತು ಕಾಂಗ್ರೆಸ್‌ ಪಕ್ಷ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪಿಟಿಐ ತಿಳಿಸಿದೆ.

ADVERTISEMENT

‘ಪಕ್ಷದ ಪ್ರಣಾಳಿಕೆಯ ಪುಟ 10ರಲ್ಲಿ, ವಿಶ್ವ ಹಿಂದೂ ಪರಿಷತ್‌ ಅಂಗಸಂಸ್ಥೆಯಾದ ಬಜರಂಗ ದಳ ಕುರಿತು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಲಾಗಿದೆ. ನಿಷೇಧಿತ ಪಿಎಫ್‌ಐ, ಸಿಮಿ ಜೊತೆ ಬಜರಂಗದಳವನ್ನು ಹೋಲಿಕೆ ಮಾಡಿದ್ದು, ಸಂಘಟನೆಯನ್ನು ನಿಷೇಧಿಸುವುದಾಗಿ ಘೋಷಿಸಲಾಗಿದೆ’ ಎಂದು ಬನ್ಸಲ್‌ ಅವರು ನೋಟಿಸ್‌ನಲ್ಲಿ ಆರೋಪಿಸಿದ್ದಾರೆ.

‘ಬಜರಂಗದಳವು ಸರ್ವರ ಹಿತ, ಸಹನೆ, ಧಾರ್ಮಿಕ ಏಕತೆ, ರಾಷ್ಟ್ರೀಯತೆ ಹಾಗೂ ಭಾರತ ಮಾತೆಯ ಸೇವೆಯಲ್ಲಿ ನಂಬಿಕೆ ಹೊಂದಿದೆ. ಧರ್ಮ ಹಾಗೂ ಸೇವೆಯ ಮೂರ್ತಿಸ್ವರೂಪರಾದ ಭಗವಾನ್ ರಾಮ ಹಾಗೂ ಹನುಮಾನ್‌ ಅವರೇ ಸಂಘಟನೆಗೆ ಪ್ರೇರಣೆ’ ಎಂದು ಹೇಳಿದ್ದಾರೆ.

‘ಪ್ರಣಾಳಿಕೆಯಲ್ಲಿ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಿದ್ದಲ್ಲದೇ, ಅದನ್ನು ಸಾರ್ವಜನಿಕವಾಗಿಯೂ ಬಿಡುಗಡೆ ಮಾಡಲಾಗಿದೆ. ಇದು ನನ್ನ ಕಕ್ಷಿದಾರರ (ಬಜರಂಗದಳ) ಖ್ಯಾತಿಗೆ ಧಕ್ಕೆ ತರಲಿದೆ’ ಎಂದು ಖರ್ಗೆ ವಿರುದ್ಧ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.