ADVERTISEMENT

‘ಲವ್‌ ಜಿಹಾದ್‌’ ವಿರುದ್ಧ ಜಾಗೃತಿ ವಿಎಚ್‌ಪಿಯಿಂದ ರಾಷ್ಟ್ರವ್ಯಾಪಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 15:48 IST
Last Updated 1 ಡಿಸೆಂಬರ್ 2022, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಅಕ್ರಮ ಮತಾಂತರ’ ಮತ್ತು ‘ಲವ್‌ ಜಿಹಾದ್‌’ ವಿರುದ್ಧ ಜಾಗೃತಿ ಮೂಡಿಸುವ ರಾಷ್ಟ್ರವ್ಯಾಪಿ ಅಭಿಯಾನ‘ಜನ್ ಜಾಗರಣ್ ಅಭಿಯಾನ’ಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗುರುವಾರ ಚಾಲನೆ ನೀಡಿತು.

ತಿಂಗಳು ಪೂರ್ತಿ ಈ ಆಂದೋಲನ ನಡೆಯಲಿದೆ. ಯುವಜನರು, ಹರೆಯದ ಹುಡುಗಿಯರು ಮತ್ತು ಮಹಿಳೆಯರಿಗೆ ಅಕ್ರಮ ಮತಾಂತರ ಮತ್ತು ಲವ್‌ ಜಿಹಾದ್‌ ಕುರಿತು ಜಾಗೃತಿ ಮೂಡಿಸುವ ಮೂಲಕ, ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ಕಾರ್ಯಪಡೆ ರೂಪಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಜೊತೆಗೆ, ಇಂಥ ಅಕ್ರಮಗಳ ವಿರುದ್ಧ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಜನ ಬೆಂಬಲವನ್ನು ಕ್ರೋಡೀಕರಿಸುವ ಉದ್ದೇಶವನ್ನೂ ಹೊಂದಲಾಗಿದೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌, ಈ ಅಭಿಯಾನದ ಭಾಗವಾಗಿ, ಡಿಸೆಂಬರ್ 10ರಿಂದ ದೇಶದ ಮೂಲೆಮೂಲೆಗಳಲ್ಲಿ ವಿಎಚ್‌ಪಿಯ ಯುವ ಘಟಕವಾದ ಬಜರಂಗ ದಳವು ‘ಶೌರ್ಯ ಯಾತ್ರೆ’ ನಡೆಸಲಿದೆ. ‘ಈ ಯಾತ್ರೆಯು ಯುವಜನರಲ್ಲಿ ಶೌರ್ಯ ತುಂಬುತ್ತದೆ. ಇದರಿಂದಾಗಿ ನಮ್ಮ ಸಹೋದರಿಯರನ್ನು ಲವ್‌ ಜಿಹಾದ್‌ನಂಥ ಅಕ್ರಮಗಳ ಸಂತ್ರಸ್ತರಾಗಿಸಲು ಯಾರೂ ಧೈರ್ಯ ತೋರುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಇದಲ್ಲದೇ, ಡಿಸೆಂಬರ್‌ 21ರಿಂದ ಡಿಸೆಂಬರ್‌ 31ರ ವರೆಗೆ ‘ಧರ್ಮ ರಕ್ಷ ಅಭಿಯಾನ’ವನ್ನು ವಿಎಚ್‌ಪಿ ಆರಂಭಿಸಲಿದೆ. ಇದೇ ವೇಳೆ, ವಿಎಚ್‌ಪಿಯ ಮಹಿಳಾ ಘಟಕವಾದ ದುರ್ಗಾ ವಾಹಿನಿ ಕೂಡಾ ಪ್ರತ್ಯೇಕ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಜೈನ್‌ ಮಾಹಿತಿ ನೀಡಿದರು.

‍ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ ಎನ್ನಲಾದ ‘ಲವ್‌ ಜಿಹಾದ್‌’ಗೆ ಸಂಬಂಧಿಸಿದ ಸುಮಾರು 400 ಪ್ರಕರಣಗಳ ಪಟ್ಟಿಯನ್ನು ಅವರು ಈ ವೇಳೆ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.