ADVERTISEMENT

6 ಭಯೋತ್ಪಾದಕರ ವಿರುದ್ಧ ದೋಷಾರೋಪ ಪಟ್ಟಿ

ವಿಎಚ್‌ಪಿ ನಾಯಕನ ಹತ್ಯೆ ಪ್ರಕರಣ l ಬಿಕೆಐ ಕೈವಾಡ

ಪಿಟಿಐ
Published 12 ಅಕ್ಟೋಬರ್ 2024, 15:48 IST
Last Updated 12 ಅಕ್ಟೋಬರ್ 2024, 15:48 IST
..
..   

ನವದೆಹಲಿ (ಪಿಟಿಐ): ಪಂಜಾಬ್‌ನಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್‌ನ ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ನಿಷೇಧಿತ ಸಂಘಟನೆ ಬಾಬರ್ ಖಾಲ್ಸಾ ಇಂಟರ್‌ನ್ಯಾಷನಲ್ಸ್‌ನ (ಬಿಕೆಐ) ಮುಖ್ಯಸ್ಥ ಪಾಕಿಸ್ತಾನ ಮೂಲದ ವಧಾವ ಸಿಂಗ್‌ ಮತ್ತು ಇತರ ಐವರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ದಳವು(ಎನ್‌ಐಎ) ದೋಷಾರೋಪ ಪಟ್ಟಿ ಸಲ್ಲಿಸಿದೆ.

‘ವಧಾವ ಸಿಂಗ್‌ ಅಲಿಯಾಸ್ ಬಾಬರ್‌ ಸೇರಿದಂತೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಮತ್ತು ಮೂವರು ಬಂಧಿತ ಆರೋಪಿಗಳು ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರರು’ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

‘ಪ್ರಸ್ತುತ ಪಾಕಿಸ್ತಾನದಲ್ಲಿರುವ ಬಾಬರ್‌, ನವಶಹಾರ್‌ನಲ್ಲಿರುವ ಹರಿಜೀತ್‌ ಸಿಂಗ್‌ ಅಲಿಯಾಸ್‌ ಲಡ್ಡಿ ಮತ್ತು ಹರಿಯಾಣದಲ್ಲಿರುವ ಕುಲ್‌ಬೀರ್‌ ಸಿಂಗ್‌ ಜೊತೆಗೂಡಿ, ಹಿಂದೂ ನಾಯಕನ ಹತ್ಯೆಗೆ ಬೇಕಾದ ಶಸ್ರ್ತಾಸ್ತ್ರ ಪೂರೈಕೆ ಮತ್ತು ಹಣಕಾಸಿನ ನೆರವನ್ನು ನೀಡಿದ್ದರು’ ಎಂದು ಎನ್‌ಐಎ ಮಾಹಿತಿ ನೀಡಿದೆ. 

ADVERTISEMENT

‘ವಿವಿಧ ದೇಶಗಳಲ್ಲಿರುವ ಬಿಕೆಐನ ಸದಸ್ಯರು ಒಟ್ಟಾಗಿ ಈ ಕೃತ್ಯದ ಸಂಚು ರೂಪಿಸಿದ್ದರು. ಹಿಂದೂ ನಾಯಕನ ಹತ್ಯೆ ನಡೆಸುವಂತೆ ಬಾಬರ್‌, ಪ್ರಸ್ತುತ ಜರ್ಮನಿಯಲ್ಲಿರುವ ಹರಿಜೀತ್‌ ಸಿಂಗ್ ಮತ್ತು ಕುಲ್‌ಬೀರ್‌ ಸಿಂಗ್‌ಗೆ ನಿರ್ದೇಶನ ನೀಡಿದ್ದ’ ಎಂದು ಎನ್‌ಐಎ ತಿಳಿಸಿದೆ. 

‘ದುಬೈ ಮೂಲ‌ದ ಲಾಜಿಸ್ಟಿಕ್‌ ಪೂರೈಕೆದಾರರು ಮತ್ತು ಭಾರತ ಮೂಲದ ಶಸ್ತ್ರಾಸ್ತ್ರ ಸಾಗಾಣಿಕೆದಾರರು ಪ್ರಕರಣದಲ್ಲಿ ಪಾತ್ರ ವಹಿಸಿರುವುದು ಪತ್ತೆಯಾಗಿದೆ, ಈ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಎನ್‌ಐಎ ಮಾಹಿತಿ ನೀಡಿದೆ.

ಪಂಜಾಬ್‌ನ ರೂಪಾನಗರ ಜಿಲ್ಲೆಯಲ್ಲಿನ ವಿಶ್ವಹಿಂದೂ ಪರಿಷತ್‌ನ ಸ್ಥಳೀಯ ನಾಯಕನಾಗಿದ್ದ ಪ್ರಭಾಕರ್‌ ಅಲಿಯಾಸ್‌ ವಿಕಾಸ್‌ ಬಗ್ಗಾ ಎಂಬವರನ್ನು ಏಪ್ರಿಲ್ 13ರಂದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.