ನವದೆಹಲಿ: ಹಿಂಸಾ ಪೀಡಿತ ಬಾಂಗ್ಲಾದೇಶದಲ್ಲಿರುವ ಹಿಂದೂ, ಸಿಖ್ ಹಾಗೂ ಇತರ ಅಲ್ಪಸಂಖ್ಯಾತರನ್ನು ಮೂಲಭೂತವಾದಿಗಳು ಗುರಿಯಾಗಿಸಿದ್ದು, ಇವರನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್, ‘ಭಾರತ– ಬಾಂಗ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕಣ್ಗಾವಲು ವಹಿಸಬೇಕು. ಅಲ್ಲಿನ ಪರಿಸ್ಥಿತಿಯ ಲಾಭ ಪಡೆದು ಪ್ರಾಯೋಜಿತ ಒಳನುಸುಳುವಿಕೆ ನಡೆಯುವ ಅಪಾಯವಿದೆ. ಇದನ್ನು ತಡೆಯಲು ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರು ವಿಲಕ್ಷಣ ರೀತಿಯ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಲ್ಲಿ ಹಿಂಸೆ ಮತ್ತು ಅರಾಜಕತೆ ಸೃಷ್ಟಿಯಾಗಿದೆ. ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಬಾಂಗ್ಲಾದಲ್ಲಿರುವ ಹಿಂದೂ, ಸಿಖ್ ಹಾಗೂ ಇತರ ಅಲ್ಪಂಖ್ಯಾತರಿಗೆ ಸೇರಿದ್ದ ಧಾರ್ಮಿಕ ಕೇಂದ್ರಗಳು, ಉದ್ದಿಮೆಗಳು ಹಾಗೂ ಮನೆಗಳನ್ನು ಲೂಟಿ ಮಾಡಿ, ಧ್ವಂಸ ಮಾಡಿರುವ ಉದಾಹರಣೆಗಳಿವೆ. ಸೋಮವಾರ ರಾತ್ರಿಯವರೆಗೂ ಪಂಚಗಡ್ ಜಿಲ್ಲೆಯಲ್ಲಿ 22 ಮನೆಗಳು, ಜೆನೀದಾ ಜಿಲ್ಲೆಯಲ್ಲಿ 20 ಹಾಗೂ ಜೆಸ್ಸೋರ್ ಪ್ರದೇಶದಲ್ಲಿ 22 ಮಳಿಗೆಗಳನ್ನು ಗುರಿಯಾಗಿಸಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಇಂಥ ಘಟನೆಗಳು ದೇಶದ ಹಲವು ಭಾಗಗಳಲ್ಲಿ ನಡೆದಿವೆ’ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
‘ಹಿಂದೂಗಳನ್ನು ಒಳಗೊಂಡು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು, ಮಕ್ಕಳು, ಧಾರ್ಮಿಕ ಕೇಂದ್ರಗಳು ಯಾವುದಕ್ಕೂ ರಕ್ಷಣೆ ಇಲ್ಲದಂತಾಗಿದೆ. ಅಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರ ಸ್ಥಿತಿ ಹೇಳತೀರದಾಗಿದೆ. ಇಸ್ಕಾನ್‌ಗೆ ಸೇರಿದ ದೇಗುಲಕ್ಕೂ ಹಾನಿ ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಒಂದು ಸಮಯದಲ್ಲಿ ಶೇ 32ರಷ್ಟಿದ್ದ ಹಿಂದೂಗಳ ಸಂಖ್ಯೆ, ಈಗ ಶೇ 8ಕ್ಕೆ ಕುಸಿದಿದೆ. ಜಿಹಾದಿಗಳ ಕಿರುಕುಳಕ್ಕೆ ಇವರು ಸತತವಾಗಿ ಒಳಗಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಭಾರತದೊಳಗೆ ನುಸುಳಲು ಭಾರೀ ದೊಡ್ಡ ಸಂಚು ರೂಪಿಸಲಾಗಿದ್ದು, ಇದಕ್ಕಾಗಿ ಭಾರತ ಮತ್ತು ಬಾಂಗ್ಲಾ ನಡುವಿನ 4,096 ಕಿ.ಮೀ. ಉದ್ದದ ಗಡಿಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯ. ದಿನದ 24 ಗಂಟೆಗಳ ಕಾಲವೂ ಗಡಿಯುದ್ದಕ್ಕೂ ಕಣ್ಗಾವಲು ವಹಿಸುವುದು ಭಾರತಕ್ಕೆ ತೀರಾ ಅಗತ್ಯವಿದೆ. ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ದೇಶ ತೊರೆದ ನಂತರ ಅಲ್ಲಿ ಮಧ್ಯಂತರ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿದೆ’ ಎಂದಿದ್ದಾರೆ.
‘ಇಂಥ ವಿಷಮ ಪರಿಸ್ಥಿತಿಯಲ್ಲಿ ಭಾರತವು ನೆರೆಯ ಬಾಂಗ್ಲಾದೇಶದೊಂದಿಗೆ ಗೆಳೆಯನಂತೆ ಜತೆಗೆ ನಿಲ್ಲಲಿದೆ. ಆದಷ್ಟು ಬೇಗ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಸರ್ಕಾರ ಅಲ್ಲಿ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಹಾಗೂ ಸಮಾಜ ಬಾಂಗ್ಲಾದೊಂದಿಗೆ ನಿಲ್ಲಲಿದೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.