ನವದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸ್ವಾಗತಿಸಿದೆ. ಅಲ್ಲದೆ ಮಗು ದತ್ತು ಪಡೆಯಲು ಸಲಿಂಗಿ ಜೋಡಿಗಳಿಗೆ ಅವಕಾಶ ನೀಡದಿರುವುದು ಕೂಡ ’ಉತ್ತಮ ನಡೆ’ ಎಂದು ಅಭಿಪ್ರಾಯಪಟ್ಟಿದೆ.
‘ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿರುವ ಹಾಗೂ ಸಲಿಂಗಿ ಜೋಡಿಗಳಿಗೆ ಮಗು ದತ್ತು ಪಡೆಯಲು ಅವಕಾಶ ನೀಡದಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮವನ್ನು ಅನುಸರಿಸುವವರು ಸೇರಿ ಎಲ್ಲ ವರ್ಗದವರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿ, ಸಲಿಂಗ ವಿವಾಹವು ಕಾನೂನು ಮಾನ್ಯತೆ ಪಡೆಯಲು ಅರ್ಹವಲ್ಲ ಎಂದು ತೀರ್ಪು ನೀಡಿದ್ದು ನಮಗೆ ಸಮಾಧಾನ ಉಂಟು ಮಾಡಿದೆ. ಇದು ಮೂಲಭೂತ ಹಕ್ಕು ಕೂಡ ಅಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
‘ಮಕ್ಕಳನ್ನು ದತ್ತು ಪಡೆಯಲೂ ಅವಕಾಶ ನಿರಾಕರಿಸಿದ್ದೂ ಕೂಡ ಉತ್ತಮ ನಡೆ’ ಎಂದು ಅವರು ತಿಳಿಸಿದ್ದಾರೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಸಂವಿಧಾನಿಕ ಪೀಠವು ಸಲಿಂಗ ವಿವಾಹ ವಿರುದ್ಧ 3:2ರ ಬಹುಮತದ ತೀರ್ಪು ನೀಡಿದೆ.
ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್.ನರಸಿಂಹ ಅವರೂ ಇದ್ದರು.
ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ಕುರಿತು 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠವು, ಮೇ 11ರಂದು ತೀರ್ಪು ಕಾಯ್ದಿರಿಸಿತ್ತು. ಈ ಕುರಿತಂತೆ ಮಂಗಳವಾರ ತೀರ್ಪು ಪ್ರಕಟಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.