ಚೆನ್ನೈ:ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರನ್ನು ಭಾನುವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು, ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದರು. ರಾತ್ರಿ ಆಸ್ಪತ್ರೆ ಹೊರಗೆ ನೂರಾರು ಜನ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ.
ವೆಂಕಯ್ಯ ನಾಯ್ಡು ಅವರು ಆಸ್ಪತ್ರೆಗೆ ಭೇಟಿ ನೀಡಿರುವ ಚಿತ್ರವನ್ನು ಡಿಎಂಕೆ ಬಿಡುಗಡೆ ಮಾಡಿದೆ. ಆಸ್ಪತ್ರೆಯಲ್ಲಿರುವ 94 ವರ್ಷ ವಯಸ್ಸಿನ ಡಿಎಂಕೆಯ ನಾಯಕ ಕರುಣಾನಿಧಿ ಅವರ ಬಳಿ ವೆಂಕಯ್ಯ ನಾಯ್ಡು ಅವರು ನಿಂತಿರುವುದು ಚಿತ್ರದಲ್ಲಿದೆ. ಕರುಣಾನಿಧಿ ಅವರು ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಅವರ ಚಿತ್ರವೊದಂದನ್ನು ಡಿಎಂಕೆ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.
‘ಕಾವೇರಿ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿಮಾಡಿದ್ದು, ಅವರ ಕುಟುಂಬದ ಸದಸ್ಯರು ಮತ್ತು ವೈದ್ಯರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಯ ಹೊರಗೆ ಇಂದು ರಾತ್ರಿಯೂಕರುಣಾನಿಧಿ ಅವರ ನೂರಾರು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಆಸ್ಪತ್ರೆ ಹೊರಗೆಪೊಲೀಸರು ಲಾಠಿ ಪ್ರಹಾರ ಮಾಡಿರುವ ವಿಡಿಯೊವನ್ನು ಎಎನ್‌ಐ ಟ್ವಿಟ್ ಮಾಡಿದೆ.
ಕರುಣಾನಿಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರಿ ಕನಿಮೋಳಿ ಅವರು ಶನಿವಾರ ಸಂಜೆ ತಿಳಿಸಿದ್ದರು. ‘ಅವರ ಆರೋಗ್ಯ ಸುಧಾರಿಸಿದೆ. ರಕ್ತದೊತ್ತಡವೂ ಸ್ಥಿರವಾಗಿದೆ’ ಎಂದೂ ಹೇಳಿದ್ದರು.
’ರಕ್ತದ ಒತ್ತಡ ಈಗ ನಿಯಂತ್ರಣದಲ್ಲಿದೆ, ಆತಂಕಪಡುವ ಅಗತ್ಯವಿಲ್ಲ’ ಎಂದು ಡಿಎಂಕೆ ಮುಖಂಡ ಎ.ರಾಜಾ ಸಹ ಹೇಳಿದ್ದರು.
ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕರುಣಾನಿಧಿ ಅವರಿಗೆ ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರ ತಡರಾತ್ರಿ ರಕ್ತದ ಒತ್ತಡ ದಿಢೀರ್ ಇಳಿಕೆಯಾದ ಕಾರಣ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮಿಳುನಾಡು ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಡಪಕ್ಷಗಳ ಮುಖಂಡರಾದ ಸೀತಾರಾಂ ಯೆಚೂರಿ, ಡಿ. ರಾಜಾ ಮತ್ತಿತರರು ದೂರವಾಣಿ ಮೂಲಕ ಕರಿಣಾನಿಧಿ ಆರೋಗ್ಯ ವಿಚಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.