ಉನ್ನಾವ್: ಸರ್ಕಾರ ಹಾಗೂ ಎನ್‌ಜಿಒಗಳಿಂದ ಲಭಿಸಿದ ಹಣವನ್ನು ಕಬಳಿಸಿದ್ದಾರೆ, ಹಾಗೂ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿ 2017ರಲ್ಲಿ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಆಕೆಯ ದೂರಿನ ಅನ್ವಯ ಮಖಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಆಕೆಯ ಚಿಕ್ಕಪ್ಪ, ತಾಯಿ, ಸಹೋದರಿ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ದ್ರೋಹ) ಹಾಗೂ 506ರಡಿ (ಕ್ರಿಮಿನಲ್ ಬೆದರಿಕೆ) ಎಫ್‌ಐಆರ್ ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ಶಶಿ ಶೇಖರ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ತನಿಖೆ ಪ್ರಾರಂಭವಾಗಿದ್ದು, ಸಾಕ್ಷ್ಯಗಳ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೂರುದಾರ ಮಹಿಳೆ ಈಗ ಮದುವೆಯಾಗಿದ್ದು, 8 ತಿಂಗಳ ಗರ್ಭಿಣಿಯೂ ಹೌದು. ಕುಟುಂಬದ ಸದಸ್ಯರು ತನಗೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
‘ಸರ್ಕಾರ ಹಾಗೂ ಎನ್‌ಜಿಒಗಳಿಂದ ಬಂದ ಹಣ ನನ್ನ ಖರ್ಚಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಹೀಗಾಗಿ ಸ್ವಲ್ಪ ಹಣ ಕೇಳಿದ್ದೆ. ಏಳು ಕೋಟಿ ಹಣ ಸಿಕ್ಕಿದೆ. ಅದನ್ನು ಪ್ರಕರಣದ ಖರ್ಚಿಗೆ ಬಳಸಲಾಗಿದೆ. ಸಿಕ್ಕಿದ ಹಣ ಸಾಲುತ್ತಿಲ್ಲ’ ಎಂದು ಚಿಕ್ಕಪ್ಪ ಹೇಳಿದ್ದಾಗಿ ದೂರಿನಲ್ಲಿ ಹೇಳಿದ್ದಾಳೆ.
‘ನನ್ನ ಚಿಕ್ಕಪ್ಪ ಕೊಲೆ ಪ್ರಯತ್ನದ ಪ್ರಕರಣದಲ್ಲಿ 10 ವರ್ಷಗಳ ಜೈಲುವಾಸ ಅನುಭವಿಸುತ್ತಿದ್ದಾರೆ. ಆತನ ನಿರ್ದೇಶನದಂತೆ ನನ್ನ ತಾಯಿ ಹಾಗೂ ಸಹೋದರಿ ವರ್ತಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಅಲ್ಲದೆ ಸರ್ಕಾರದಿಂದ ಲಭಿಸಿದ ಮನೆಯಿಂದ ತನ್ನನ್ನು ಹಾಗೂ ತನ್ನ ಗಂಡನನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
2017ರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್, ದೂರುದಾರ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಸೆಂಗರ್ ಮೇಲಿದ್ದ ಆರೋಪ ಸಾಬೀತಾಗಿ, 2019ರ ಡಿಸೆಂಬರ್ 20ರಂದು ಆತನಿಗೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ವಿಧಾನಸಭಾ ಸದಸ್ವತ್ವ ಕಳೆದುಕೊಂಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.