ಪ್ರಯಾಗ್‌ರಾಜ್/ ಬರೇಲಿ: ‘ಬುಲ್ಡೋಜರ್ ಕ್ರಮ’ದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಮರು ದಿನವೇ, ಉತ್ತರ ಪ್ರದೇಶದಾದ್ಯಂತ ‘ಬುಲ್ಡೋಜರ್ ಕ್ರಮ’ದಿಂದ ಸಂತ್ರಸ್ತರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ಕಾನೂನು ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಸಂತ್ರಸ್ತ ಜಾವೇದ್ ಮೊಹಮ್ಮದ್, ‘ನಿರಂಕುಶ ರೀತಿಯಲ್ಲಿ ಮನೆಗಳನ್ನು ಕೆಡವಬಾರದು. ನನ್ನ ಎರಡು ಅಂತಸ್ತಿನ ಮನೆಯನ್ನು ಕೆಡವಿದಾಗ, ನನ್ನ ಹೆಂಡತಿ ಮತ್ತು ಮಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು. ಯಾವುದೇ ಸೂಚನೆ ನೀಡದೆ, ನನ್ನ ಮನೆಯನ್ನು ನೆಲಸಮಗೊಳಿಸಲಾಯಿತು. ಸರ್ಕಾರವನ್ನು ಮೆಚ್ಚಿಸುವ ಉತ್ಸುಕತೆಯಿಂದ ಸ್ಥಳೀಯಾಡಳಿತವು ರಾತ್ರೋರಾತ್ರಿ ಈ ಕೆಲಸ ಮಾಡಿತು’ ಎಂದರು.
ಪ್ರಯಾಗ್‌ರಾಜ್‌ನಲ್ಲಿ, ಪಂಪ್‌ಸೆಟ್ ವ್ಯವಹಾರ ನಡೆಸುತ್ತಿರುವ ಜಾವೇದ್ ಮೊಹಮ್ಮದ್ ಅವರ ಮನೆಯನ್ನು 2022ರ ಜೂನ್ 12ರಂದು ಬುಲ್ಡೋಜರ್‌ನಿಂದ ಕೆಡವಲಾಯಿತು. ಈತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಅಟಾಲಾ ಪ್ರದೇಶದಲ್ಲಿ ನಡೆದಿದ್ದ ಕಲ್ಲು ತೂರಾಟದ ಘಟನೆಯ ಪ್ರಮುಖ ಆರೋಪಿ ಈತ ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಗೌಸ್‌ಗಂಜ್‌ನ ನಿವಾಸಿಗಳಾದ ರಾಸಿದಾನ್, ನಫೀಸಾ ಮತ್ತು ಸೈರಾ ಖಾತೂನ್ ಅವರು ತಮಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.
ಬರೇಲಿಯ ಶಾಹಿ ಪ್ರದೇಶದ ಗೌಸ್‌ಗಂಜ್ ಗ್ರಾಮದಲ್ಲಿ ಜುಲೈ 22 ರಂದು 16 ಜನರ ಮನೆಗಳನ್ನು ಕೆಡವಲಾಗಿತ್ತು. ತಾಜಿಯಾ ಮೆರವಣಿಗೆ ವೇಳೆ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳೆಂದು ಗುರುತಿಸಿ ಇವರ ಮನೆಗಳನ್ನು ನೆಲಸಮಗೊಳಿಸಲಾಗಿತ್ತು.
‘ಗ್ರಾಮದಲ್ಲಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರ 11 ಮನೆಗಳನ್ನು ನೆಲಸಮಗೊಳಿಸಲು ಗುರುತಿಸಲಾಗಿತ್ತು. ಗ್ರಾಮ ಸಭಾಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಈ ಮನೆಗಳನ್ನು ನಿರ್ಮಿಸಲಾಗಿತ್ತು. ಕಂದಾಯ ಅಧಿಕಾರಿಗಳ ತಂಡವು, ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಇಂತಹ ಇನ್ನೂ ಐದು ಮನೆಗಳನ್ನು ಗುರುತಿಸಿತು. ನಂತರ ಅವುಗಳನ್ನು ಕೆಡವಲಾಯಿತು’ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತೃಪ್ತಿ ಗುಪ್ತಾ ಸ್ಪಷ್ಟನೆ ನೀಡಿದ್ದಾರೆ.
ಬರೇಲಿಯಲ್ಲಿ ಜೂನ್ 22 ರಂದು ವಿವಾದವೊಂದರ ಸಂಬಂಧ ರಾಜೀವ್ ರಾಣಾ ಮತ್ತು ಆದಿತ್ಯ ಉಪಾಧ್ಯಾಯ ಅವರ ಎರಡು ಗುಂಪುಗಳು ಪರಸ್ಪರ ಗುಂಡು ಹಾರಿಸಿಕೊಂಡಿದ್ದವು. ಇದಕ್ಕಾಗಿ ಜೂನ್ 27 ರಂದು ತುಳಶೇರ್‌ಪುರ ಪ್ರದೇಶದಲ್ಲಿ ರಾಣಾ ಅವರ ಮನೆ ಮತ್ತು ಹೋಟೆಲ್ ಕೆಡವಲಾಯಿತು. ಜುಲೈ 28 ರಂದು ಉಪಾಧ್ಯಾಯ ಅವರ ರೆಸಾರ್ಟ್ ಕೂಡ ನೆಲಸಮಗೊಳಿಸಲಾಗಿತ್ತು.
ರಾಜೀವ್ ರಾಣಾ ಅವರು ಪುತ್ರಿ ಆವಂತಿಕಾ ಅವರು ‘ಪರಿಹಾರಕ್ಕಾಗಿ ಪೊಲೀಸರು, ಜಿಲ್ಲಾಡಳಿತ ಮತ್ತು ಬರೇಲಿ ಅಭಿವೃದ್ಧಿ ಪ್ರಾಧಿಕಾರವನ್ನು ನ್ಯಾಯಾಲಯದ ಕಟಕಟೆಗೆ ಹತ್ತಿಸಲು ನಿರ್ಧರಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಉಪಾಧ್ಯಾಯ ಅವರ ರೆಸಾರ್ಟ್ ಅನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು’ ಎಂದು ಬಿಡಿಎ ಉಪಾಧ್ಯಕ್ಷ ಮಣಿಕಂಡನ್ ಎ. ಅವರು ಹೇಳಿದರೆ, ಉದ್ಯಮಿ ಉಪಾಧ್ಯಾಯ ಅವರ ತಾಯಿ ಸಾವಿತ್ರಿ ದೇವಿ, ‘ರೆಸಾರ್ಟ್ ನೆಲಸಮಕ್ಕೆ ಸಂಬಂಧಿಸಿದಂತೆ ತಮಗೆ ಯಾವುದೇ ನೋಟಿಸ್ ನೀಡಿಲ್ಲ. ನಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಸಮಯ ನೀಡಲಿಲ್ಲ’ ಎಂದು ಹೇಳಿದರು.
ಅಕ್ಟೋಬರ್ 6 ರಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಎಂಟು ಜನರು ಮೃತಪಟ್ಟ ಘಟನೆ ನಂತರ ಸಿರೌಲಿ ಪ್ರದೇಶದ ಕಲ್ಯಾಣಪುರ ಗ್ರಾಮದಲ್ಲಿ ಇದೇ ರೀತಿ ಐದು ಮನೆಗಳನ್ನು ನೆಲಸಮಗೊಳಿಸಲಾಗಿತ್ತು.
‘ಪಟಾಕಿ ಸ್ಫೋಟದಿಂದ ಮನೆಗಳು ಹಾನಿಗೊಳಗಾಗಿದ್ದವು. ಅವು ಕುಸಿಯುವುದನ್ನು ಮತ್ತು ಹೆಚ್ಚಿನ ಜೀವಹಾನಿ ತಡೆಯಲು ನೆಲಸಮಗೊಳಿಸಬೇಕಾಯಿತು’ ಎಂದು ಆಂವಲಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನನ್ಹೆ ರಾಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.