ನವದೆಹಲಿ:ದೇಹದಾರ್ಢ್ಯಪಟು ಬಾಬಿ ಕಟಾರಿಯಾ ಅವರು ಸ್ಪೈಸ್‌ಜೆಟ್ ವಿಮಾನದಲ್ಲಿ ಸಿಗರೇಟ್ ಸೇದಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ತನಿಖೆ ನಡೆಸುವಂತೆವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸ್ಪೈಸ್‌ಜೆಟ್ ವಿಮಾನದ ಹಿಂಬದಿಯ ಆಸನದಲ್ಲಿ ಕುಳಿತಿರುವ ಬಾಬಿ, ಲೈಟರ್‌ನಿಂದ ಸಿಗರೇಟ್ ಹಚ್ಚುತ್ತಿರುವ ದೃಶ್ಯವು ವಿಡಿಯೊದಲ್ಲಿದೆ.ನಿಯಮದ ಪ್ರಕಾರ ಪ್ರಯಾಣಿಕರು ವಿಮಾನದಲ್ಲಿ ಲೈಟರ್ ಕೊಂಡೊಯ್ಯುವಂತಿಲ್ಲ. ಸಿಗರೇಟ್ ಸೇದಲೂ ಅವಕಾಶ ಇಲ್ಲ.
‘ಈ ವರ್ಷದ ಜನವರಿ 20ರಂದು ದುಬೈಯಿಂದ ದೆಹಲಿಗೆ ಹೊರಡಲು ಸಿದ್ಧವಾಗಿದ್ದ ಎಸ್‌ಜಿ 706 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ವಿಮಾನ ಹತ್ತುವ ವೇಳೆ ಇದು ನಡೆದಿದೆ. ಹೀಗಾಗಿ ಈ ವಿಚಾರ ವಿಮಾನದೊಳಗಿದ್ದ ಸಿಬ್ಬಂದಿ ಗಮನಕ್ಕೆ ಬಂದಿಲ್ಲ.ಈ ವಿಷಯ ತಿಳಿದೊಡನೆ ನಾವು ಸಮಗ್ರ ತನಿಖೆ ಕೈಗೊಂಡಿದ್ದೆವು. ಗುರುಗ್ರಾಮದ ಉದ್ಯೋಗ ವಿಹಾರ ಪೊಲೀಸ್ ಠಾಣೆಯಲ್ಲಿ ಬಾಬಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅವರ ಹೆಸರನ್ನು 15 ದಿನಗಳ ಕಾಲ (ಫೆಬ್ರುವರಿಯಲ್ಲಿ) ‘ನೋ ಫ್ಲೈಯಿಂಗ್’ ಪಟ್ಟಿಯಲ್ಲಿ ಸೇರಿಸಲಾಗಿತ್ತು’ ಎಂದು ಸ್ಪೈಸ್‌ಜೆಟ್ ಹೇಳಿದೆ.
ಈ ವಿಡಿಯೊ ಗುರುವಾರ ಟ್ವಿಟರ್‌ನಲ್ಲಿ ಹರಿದಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸಿಂಧಿಯಾ, ‘ಪ್ರಕರಣದ ತನಿಖೆಗೆ ಸೂಚಿಸಲಾಗಿದೆ. ಇಂತಹ ದುರ್ವರ್ತನೆಯನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.
‘ಈ ವರ್ಷದ ಜನವರಿಯಲ್ಲೇ ಸಿಗರೇಟ್ ಸೇವನೆ ವಿಷಯ ನಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುರುಗ್ರಾಮದಉದ್ಯೋಗ ವಿಹಾರ ಪೊಲೀಸ್ ಠಾಣೆಗೆಪತ್ರ ಬರೆಯಲಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು’ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.