ಭೋಪಾಲ: ಮಧ್ಯಪ್ರದೇಶ ಭೋಪಾಲದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅನಾರೋಗ್ಯ ಕಾರಣಗಳನ್ನು ಒಡ್ಡಿ ಸದಾ ಗಾಲಿಕುರ್ಚಿಯಲ್ಲಿ ತೆರಳುತ್ತಿದ್ದರು. ಆದರೆ ಏಕಾಏಕಿ ಬಾಸ್ಕೆಟ್‌ಬಾಲ್ ಆಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಪ್ರಸ್ತುತ ವಿಡಿಯೊವೊಂದು ವೈರಲ್ ಆಗಿದೆ. ಮಧ್ಯ ಪ್ರದೇಶದ ಕಾಂಗ್ರೆಸ್ ಕೂಡಾ ಇದರಿಂದ ಹೊರತಾಗಿಲ್ಲ. ಇದುವರೆಗೆ ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗದ ಪ್ರಜ್ಞಾ, ಬಾಸ್ಕೆಟ್‌ಬಾಲ್‌ನಲ್ಲಿ ಕೌಶಲ್ಯವನ್ನು ಪ್ರದರ್ಶಿಸುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದೆ.
ಮೂಲಗಳ ಪ್ರಕಾರ, ಭೋಪಾಲದ ಸಾಕೇತ್ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾ ಭಾಗವಹಿಸಿದ್ದರು. ಅಲ್ಲಿ ಮೈದಾನದಲ್ಲಿ ಕೆಲವು ಮಂದಿ ಬಾಸ್ಕೆಟ್‌ಬಾಲ್ ಆಡುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಅಂಗಣಕ್ಕೆ ತೆರಳಿ ಬಾಸ್ಕೆಟ್‌ಬಾಲ್ ಕೌಶಲ್ಯತೆಯನ್ನು ಮೆರೆದಿದ್ದಾರೆ. ಬಲಗೈಯಿಂದ ಚೆಂಡನ್ನು ಡ್ರಿಬಲ್ ಮಾಡುವ ಮೂಲಕ ನೆರೆದಿದ್ದವರ ಕೈಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, 'ನಾನು ಇಲ್ಲಿಯ ವರೆಗೆ ಸಂಸದೆ ಪ್ರಜ್ಞಾ ಅವರನ್ನು ಗಾಲಿಕುರ್ಚಿಯಲ್ಲಿ ನೋಡಿದ್ದೇನೆ. ಆದರೆ ಇಂದು ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್ ಕೈಚಳಕ ತೋರುವ ಆಕೆಯನ್ನು ನೋಡಿ ಖುಷಿಪಟ್ಟಿದ್ದೇನೆ' ಎಂದು ಹೇಳಿದ್ದಾರೆ.
'ಇದುವರೆಗೆ ಗಾಯದಿಂದಾಗಿ ಆಕೆಗೆ ಎದ್ದು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ದೇವರು ಅವರಿಗೆ ಯಾವಾಗಲೂ ಆರೋಗ್ಯ ಕರುಣಿಸಲಿ' ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಗೆ ಸ್ವತಃ ಪ್ರಜ್ಞಾ ಸಿಂಗ್ ಠಾಕೂರ್ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.