ಮುಂಬೈ:ಮಹಾರಾಷ್ಟ್ರದಾದ್ಯಂತ ಕಳೆದ 25 ದಿನಗಳಲ್ಲಿ ನಡೆದ ಹಿಂಸಾಚಾರ ಪ್ರಕರಣಗಳಿಗೆ ಮಹತ್ವದ ತಿರುವು ದೊರೆತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮೂರೂ ವಿಡಿಯೊಗಳನ್ನು ದುರುದ್ದೇಶದಿಂದ ಎಡಿಟ್ ಮಾಡಲಾಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಸ್ತೆ ಪಕ್ಕದಲ್ಲಿ ಬಾಲಕನೊಬ್ಬನನ್ನು ಅಪಹರಿಸಿದ್ದರು. ಇದೇ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಪಾದಾಚಾರಿ ಮಾರ್ಗದಲ್ಲಿ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.ಬದ್ವಾನ್ ಎಂಬ ಹಳ್ಳಿಯಲ್ಲಿ ನಡೆದಿದೆ ಎನ್ನಲಾದಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಮಹಾರಾಷ್ಟ್ರದಲ್ಲಿ ಹಿಂಸಾಚಾರ ಸೃಷ್ಟಿಯಾಗಿತ್ತು.
ಈ ವೇಳೆ 9 ಜನರು ಪ್ರಾಣ ಕಳೆದುಕೊಂಡು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಫಾರ್ವರ್ಡ್ ಆಗುವ ವೇಳೆ ವಿಡಿಯೊ ಜೊತೆ ಉಲ್ಲೇಖಿಸಲಾಗಿರುವ ಪ್ರದೇಶಗಳಿಗೂ ವಿಡಿಯೊಗಳಿಗೂ ಸಂಬಂಧವಿಲ್ಲ. ದುರುದ್ದೇಶಕ್ಕಾಗಿ ಅವುಗಳನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಾದ್ಯಂತ ಹರಿದಾಡಿರುವಕನಿಷ್ಠ ಇನ್ನೂ ಎರಡು ವಿಡಿಯೊಗಳನ್ನು ಪರೀಕ್ಷಿಸಲಿದ್ದಾರೆ.
‘ಸದ್ಯ ದೊರೆತಿರುವ ಎಲ್ಲ ಮೂರೂ ವಿಡಿಯೊಗಳು ಅಪಹರಣ ಆಗಿದೆ ಎನ್ನಲಾದ ಸ್ಥಳವನ್ನು ತಪ್ಪಾಗಿ ದಾಖಲಿಸಿವೆ’ ಎಂದು ನಾಶಿಕ್ ಗ್ರಾಮೀಣ ವಿಭಾಗದ ಹೆಚ್ಚುವರಿ ಅಧೀಕ್ಷಕ ಹರ್ಷ ಪಾದ್ದರ್ ಹೇಳಿದ್ದಾರೆ.
ಇದೇ ವಿಡಿಯೊದ ಹಲವು ಆವೃತ್ತಿಗಳು ‘ಈ ಘಟನೆ ಭಾರತದಲ್ಲಿ ನಡೆದಿದೆ’ ಎನ್ನುವಂತಹ ಮಾಹಿತಿಯೊಡನೆ ದೇಶದಾದ್ಯಂತ ಹರಿದಾಡುತ್ತಿವೆ.
ಆದರೆ, ಈ ವಿಡಿಯೊದ ಮೂಲ ಪಾಕಿಸ್ತಾನದ್ದು. ಮಕ್ಕಳ ಅಪಹರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಚಾರದ ಭಾಗವಾಗಿ 2016ರಲ್ಲಿ ಕರಾಚಿಯಲ್ಲಿ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ರೋಷ್ನಿ ಹೆಲ್‌ಲೈನ್ ಈ ವಿಡಿಯೊ ರೂಪಿಸಿತ್ತು.
ಸ್ಥಳೀಯ ಜಾಹೀರಾತು ಸಂಸ್ಥೆಸ್ಪೆಕ್ಟ್ರಂ ವೈ & ಆರ್ ನ ಸಹಯೋಗದಲ್ಲಿ ನಿರ್ಮಿಸಲಾಗಿತ್ತು.
ಅದರಲ್ಲಿ, ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಒಬ್ಬ ಬಾಲಕನನ್ನು ಅಪಹರಿಸಿತ್ತಾರೆ. ವಾಪಸ್ ಆಗುವ ಅವರು ಮಗುವನ್ನು ಅಲ್ಲಿಯೇ ಬಿಟ್ಟು ಮಕ್ಕಳ ಕಳವು ಜಾಗೃತಿ ಮೂಡಿಸುವ ಪೋಸ್ಟರ್ ಪ್ರದರ್ಶಿಸುತ್ತಾರೆ. ‘ಕರಾಚಿ ಬೀದಿಯಲ್ಲಿ ಆಡುವ ಮಗುವನ್ನು ಅಪಹರಿಸಲು ಒಂದು ಕ್ಷಣ ಸಾಕು. ಪ್ರತಿವರ್ಷ ಕರಾಚಿಯಲ್ಲಿ 3,000 ಮಕ್ಕಳು ಅಪಹರಣಕ್ಕೊಳಗಾಗುತ್ತಿದ್ದಾರೆ. ನಿಮ್ಮ ಮಕ್ಕಳ ಮೇಲೊಂದು ಕಣ್ಣಿಡಿ’ ಎಂಬ ಸಂದೇಶ ಪ್ರಕಟವಾಗುತ್ತದೆ.
ಜಾಹೀರಾತು ಸಂಸ್ಥೆಯ ವಕ್ತಾರ ಕರಾಚಿಯಲ್ಲಿ ನಾಪತ್ತೆಯಾಗುವ ಮಕ್ಕಳ ಕುರಿತು ಜಾಗೃತಿ ಮೂಡಿಸುವ ಹಾಗೂ ಈ ಸಮಸ್ಯೆಯನ್ನು ಮುನ್ನೆಲೆಗೆ ತರುವ ದೊಡ್ಡ ಅಭಿಯಾನದ ಭಾಗವಾಗಿ ಕಿರು ವಿಡಿಯೊವನ್ನು ನಿರ್ಮಿಸಲಾಗಿತ್ತು ಎಂದಿದ್ದಾರೆ.
‘ಇಲ್ಲಿ ವಾರ್ಷಿಕ 3,000 ಮಕ್ಕಳು ನಾಪತ್ತೆಯಾಗುತ್ತಾರೆ. ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ 63 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದ್ದು, ಅಪಾರ ಪ್ರಚಾರವನ್ನೂ ಪಡೆದುಕೊಂಡಿತ್ತು. ಇದರ ಪರಿಣಾಮವಾಗಿ ಸುಮಾರು 10 ಮಕ್ಕಳು ಮತ್ತೆ ಕುಟುಂಬವನ್ನು ಸೇರಿಕೊಂಡಿವೆ’ ಎಂದು ಹೇಳಿಕೊಂಡಿದ್ದಾರೆ.
ಈ ವಿಡಿಯೊವನ್ನು ದುರುಪಯೋಗ ಪಡಿಸಿಕೊಂಡಿರುವುದರಿಂದಾಗಿ ನಾವು ಸಂಪೂರ್ಣವಾಗಿ ದಿಗಿಲುಗೊಂಡಿದ್ದೇವೆ. ಮೂಲ ವಿಡಿಯೊದಲ್ಲಿದ್ದ ಸಂದೇಶದ ಭಾಗವನ್ನು ಎಡಿಟ್ ಮಾಡಿ ತೆಗೆದು ಹಾಕಲಾಗಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಡಲಾಗಿದೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹೊಸ ವಿಡಿಯೊದಲ್ಲಿರುವ ಅಂಶವನ್ನು ಜಾಗರೂಕವಾಗಿ ಪರಿಶೀಲಿಸಬೇಕು’ ಎಂದು ಸಾರ್ವಜನಿಕರಿಗೆ ಮನವಿ ಮಾಡಿರುವ ಸಂಸ್ಥೆ, ‘ಭಾರತದಲ್ಲಿಯಾಗಲಿ ಅಥವಾ ಪಾಕಿಸ್ತಾನದಲ್ಲಿಯಾಗಲಿ ಈ ವಿಡಿಯೊ ದುರ್ಬಳಕೆಯಾಗುವುದನ್ನು ನಾವು ಬಯಸುವುದಿಲ್ಲ’ ಎಂದು ಹೇಳಿದೆ.
ನಾಶಿಕ್ ಜಿಲ್ಲೆಯ ಮಾಲೆಗಾಂವ್ ಪ್ರದೇಶದಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಎರಡು ತಿಂಗಳಿನಿಂದ ಎರಡು ವಿಡಿಯೊಗಳು ವೈರಲ್ ಆಗುತ್ತಿರುವುದು ಕಂಡು ಬಂದಿದೆ. ಜುಲೈ 1 ರಂದು ಇಲ್ಲಿನ ಗೋಸಾವಿ ಅಲೆಮಾರಿ ಜನಾಂಗದವರನ್ನು ಮಕ್ಕಳ ಕಳ್ಳರು ಎಂದು ಆರೋಪಿಸಿದ್ದ ಸ್ಥಳೀಯರು ದಾಳಿ ಮಾಡಲು ಮುಂದಾಗಿದ್ದರು. ಪೊಲೀಸರು ಅವರನ್ನು ರಕ್ಷಿಸಿದ್ದರು. ಅದೇ ದಿನ ಧುಲೆ ಜಿಲ್ಲೆಯ ರೈನ್ಪಾದ್ ಗ್ರಾಮದಲ್ಲಿಐದು ಜನರನ್ನು ಹತ್ಯೆ ಮಾಡಲಾಗಿತ್ತು.
ರಸ್ತೆಯಲ್ಲಿ ಸಾಗುವ ಮುಸ್ಲಿಂ ಮಹಿಳೆಯರ ಗುಂಪು ಸ್ವಲ್ಪ ದೂರ ಹೋದ ಬಳಿಕ ಬುರ್ಖಾ ಬದಲಿಸುತ್ತಾರೆ. ಮಗುವೊಂದುಅವರನ್ನು ಹಿಂಬಾಲಿಸುವುದು ಇನ್ನೊಂದು ವಿಡಿಯೊದಲ್ಲಿ ಸೆರೆಯಾಗಿದೆ. ಇದರಲ್ಲಿರುವ ಮಹಿಳೆಯರನ್ನೂ ಮಕ್ಕಳ ಕಳ್ಳರು ಎಂಬಂತೆ ಬಿಂಬಿಸಲಾಗಿದೆ.
‘ಇದು ಅಪಹರಣ ಪ್ರಕರಣವಲ್ಲ. ಆದರೆ, ಆ ಮಹಿಳೆಯರನ್ನು ಅಪಹರಣಕಾರರೆಂಬಂತೆ ಬಿಂಬಿಸಿ ವಿಡಿಯೊವನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹರಿಬಿಡಲಾಗಿದೆ. ಇದು ಮಾಲೇಗಾಂವ್ ಸಮೀಪದ ನಂದೂರ್‌ಬಾರ್ ಗೆ ಸಂಬಂಧಿಸಿದ ವಿಡಿಯೊ. ಆದರೆ ಇದನ್ನು ಬೆಂಗಳೂರಿನಲ್ಲಿ ನಡೆದ ಘಟನೆ ಎಂಬಂತೆ ಬಿಂಬಿಸಿ ಹರಿಡಲಾಗಿದೆ’ ಎಂದೂ ಹರ್ಷ ಪಾದ್ದರ್ ತಿಳಿಸಿದ್ದಾರೆ.
ಮತ್ತೊಂದು ವಿಡಿಯೊ ಜುಲೈ ಮೊದಲ ವಾರದಲ್ಲಿ ವೈರಲ್ ಆಗಿತ್ತು. ಶಿರಡಿಯಲ್ಲಿ ವ್ಯಕ್ತಿ ಹಾಗು ಮಗುವೊಂದು ಜೊತೆಯಾಗಿ ಪ್ರಯಾಣಿಸುತ್ತಿರುವುದು ಆ ವಿಡಿಯೊದಲ್ಲಿತ್ತು.ಬಳಿಕ ಮಗುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮಗುವನ್ನು ಅಪಹರಿಸಿರುವ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂಬರ್ಥದಲ್ಲಿ ವಿಡಿಯೊವನ್ನು ಹರಿಬಿಡಲಾಗಿತ್ತು.
ಆದರೆ ವಿಚಾರಣೆ ವೇಳೆ ’ತನ್ನ ಕುಟುಂಬ ಸ್ನೇಹಿತರೊಬ್ಬರ ಜೊತೆಯಲ್ಲಿ ಸ್ವಯಿಚ್ಛೆಯಿಂದಲೇ ಪ್ರಯಾಣಿಸುತ್ತಿರುವುದಾಗಿ’ ಮಗು ಹೇಳಿಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.