ADVERTISEMENT

ಗರ್ಭಪಾತ | ಅಪ್ರಾ‍ಪ್ತೆಯ ಅಭಿಪ್ರಾಯ ಮುಖ್ಯ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:32 IST
Last Updated 6 ಮೇ 2024, 15:32 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಆಯ್ಕೆಯ ಹಕ್ಕು ಹಾಗೂ ಸಂತಾನೋತ್ಪತ್ತಿಯ ಸ್ವಾತಂತ್ರ್ಯವು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಾಗ ಆಕೆಯ ಅಭಿಪ್ರಾಯವು ಪೋಷಕರ ಅಭಿಪ್ರಾಯಕ್ಕೆ ಭಿನ್ನವಾಗಿದ್ದರೆ ನ್ಯಾಯಾಲಯವು ಗರ್ಭಪಾತದ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಬಾಲಕಿಯ ಅಭಿಪ್ರಾಯವನ್ನು ಮುಖ್ಯವೆಂದು ಪರಿಗಣಿಸಬೇಕು ಎಂದು ಹೇಳಿದೆ. 

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ನ್ಯಾಯಪೀಠವು 14 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಪ್ರಕರಣದಲ್ಲಿ ಈ ಮಾತು ಹೇಳಿದೆ.

ADVERTISEMENT

‘ಸಂತಾನೋತ್ಪತ್ತಿಯ ವಿಚಾರದಲ್ಲಿ ಹಾಗೂ ಗರ್ಭಪಾತದ ವಿಚಾರದಲ್ಲಿ ಗರ್ಭಣಿಯ ಅಭಿಪ್ರಾಯವು ಬಹಳ ಮುಖ್ಯವಾಗುತ್ತದೆ. ಗರ್ಭಿಣಿ ಹಾಗೂ ಆಕೆಯ ಪೋಷಕರ ನಡುವೆ ಅಭಿಪ್ರಾಯಭೇದ ಇದ್ದಲ್ಲಿ, ನ್ಯಾಯಸಮ್ಮತವಾದ ತೀರ್ಮಾನವನ್ನು ಕೈಗೊಳ್ಳುವಾಗ ಅಪ್ರಾಪ್ತ ವಯಸ್ಸಿನ ಆ ಗರ್ಭಿಣಿ ಅಥವಾ ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಇರದ ವ್ಯಕ್ತಿಯ ಅಭಿಪ್ರಾಯವನ್ನು ಬಹುಮುಖ್ಯ ಅಂಶವಾಗಿ ಸ್ವೀಕರಿಸಬೇಕು’ ಎಂದು ಪೀಠವು ಹೇಳಿದೆ.

ಈ ಪ್ರಕರಣದಲ್ಲಿ ಗರ್ಭಪಾತವನ್ನು ಮಾಡದೆ ಇರಲು ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ಪೋಷಕರು ತೀರ್ಮಾನಿಸಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕು ಎಂದು ಪೀಠ ಹೇಳಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಯು, ಗರ್ಭಪಾತದ ಬಗ್ಗೆ ಸದುದ್ದೇಶದಿಂದ ನೀಡುವ ಅಭಿಪ್ರಾಯದ ವಿಚಾರವಾಗಿ ನೋಂದಾಯಿತ ವೈದ್ಯರು ಹಾಗೂ ವೈದ್ಯಕೀಯ ಮಂಡಳಿಗೆ ರಕ್ಷಣೆ ಒದಗಿಸಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ವೈದ್ಯಕೀಯ ಗರ್ಭ‍ಪಾತ ಕಾಯ್ದೆಯ ಪ್ರಕಾರ ನೋಂದಾಯಿತ ವೈದ್ಯರು ಅಥವಾ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಪಡೆಯುವುದು ಅನಿವಾರ್ಯ. ಆದರೆ ಇದು, ಗರ್ಭಪಾತದ ಬಗ್ಗೆ ತನ್ನ ಆಯ್ಕೆಯನ್ನು ಹೇಳುವ ಗರ್ಭಿಣಿಯ ಹಕ್ಕಿಗೆ ನೋಂದಾಯಿತ ವೈದ್ಯ ಅಥವಾ ವೈದ್ಯಕೀಯ ಮಂಡಳಿ ಅಡ್ಡಿಯಾಗುವಂತೆ ಮಾಡುತ್ತದೆ. ನೋಂದಾಯಿತ ವೈದ್ಯ ಅಥವಾ ವೈದ್ಯಕೀಯ ಮಂಡಳಿಯ ಮನಸ್ಸಿನಲ್ಲಿ ಭೀತಿ ಇದ್ದಾಗ, ಗರ್ಭಿಣಿಯ ಮೂಲಭೂತ ಹಕ್ಕುಗಳಿಗೆ ತೊಂದರೆ ಉಂಟಾಗುತ್ತದೆ’ ಎಂದು ಕೂಡ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.