ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಕೇಂದ್ರ ಜಾಗೃತ ಆಯೋಗ ತನಿಖೆ ನಡೆಸಿ ಸುಪ್ರೀಕೋರ್ಟ್‌ಗೆ ವರದಿ ಸಲ್ಲಿಸಿದ್ದು ಇದರಲ್ಲಿ ಉಲ್ಲೇಖವಾಗಿರುವ ಕೆಲ ಅಂಶಗಳ ಬಗ್ಗೆ ನವೆಂಬರ್ 19ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಅಲೋಕ್ ವರ್ಮಾಗೆ ಸೂಚನೆ ನೀಡಿದೆ.
ಸಿವಿಸಿ ನೀಡಿರುವ ವರದಿಯಲ್ಲಿ ಕೆಲವು ಅತೃಪ್ತಿಕರ ಅಂಶಗಳು ಪ್ರಸ್ತಾಪವಾಗಿದ್ದು, ಈ ಅಂಶಗಳ ವಿರುದ್ಧ ಪ್ರತ್ಯೇಕ ತನಿಖೆ ನಡೆಯುವ ಅಗತ್ಯವಿದೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ಸಿಬಿಐ ಅಂತಃಕಲಹ ಹೈಕೋರ್ಟ್ ಅಂಗಳಕ್ಕೆ
ಸಿಬಿಐ ವರ್ಚಸನ್ನು ಕಾಪಾಡುವ ಸಲುವಾಗಿ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ.ನ್ಯಾಯಾಧೀಶ ಎ.ಕೆ. ಪಟ್ನಾಯಕ್ ಅವರು ಸಿವಿಸಿ ವರದಿಯನ್ನು ಪರಿಶೀಲಿಸಿ ಟಿಪ್ಪಣಿಗಳನ್ನು ಬರೆದುಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ನವೆಂಬರ್ 19ರ ಒಳಗೆ ಅಲೋಕ್ ವರ್ಮಾ ಪ್ರತಿಕ್ರಿಯೆ ನೀಡಿದರೆ ನವೆಂಬರ್ 20ರಿಂದ ವಿಚಾರಣೆ ಆರಂಭವಾಗಲಿದೆ. ಸಿವಿಸಿ ವರದಿಯ ಪ್ರತಿಯನ್ನು ಅಟಾರ್ನಿ ಜನರ್ ಮತ್ತು ಸಾಲಿಸಿಟರ್ ಜನರ್ ಅವರಿಗೂ ನೀಡುವಂತೆ ಸುಪ್ರೀಂ ಸೂಚಿಸಿದೆ.
ಅಲೋಕ್ ವರ್ಮಾ ಪರವಾಗಿ ಪಾಲಿ ನಾರಿಮನ್ ವಾದ ಮಂಡನೆ ಮಾಡಿದರು. ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ಸಿವಿಸಿ ವರದಿಯ ಒಂದು ಪ್ರತಿಯನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಆ ಮನವಿಯನ್ನು ಮಾನ್ಯ ಮಾಡಲಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.