ಚೆನ್ನೈ: ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಮೊದಲ ಸಭೆ ನಡೆಸಿರುವ ನಟ ವಿಜಯ ದಳಪತಿ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ, 26 ನಿರ್ಣಯಗಳನ್ನು ಅಂಗೀಕರಿಸಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ವಿರೋಧ ವ್ಯಕ್ತಪಡಿಸಿರುವ ಅದು, ನೀಟ್ ಪರೀಕ್ಷೆ ರದ್ದುಗೊಳಿಸುವ ಬೇಡಿಕೆಯನ್ನು ಬೆಂಬಲಿಸಿದೆ.
ಇದೇ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಟಿವಿಕೆ, ‘ಜಾತಿ ಸಮೀಕ್ಷೆ ನಡೆಸುವಂತೆ, ಪರಂದೂರು ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡುವಂತೆ ಮತ್ತು ಮದ್ಯದಂಗಡಿಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚುವಂತೆ’ ಒತ್ತಾಯಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ಅಸಮಾಧಾನ ಹೊರಹಾಕಿರುವ ಟಿವಿಕೆ, ಜಂಟಿ ಸಂಸದೀಯ ಸಮಿತಿ ಮುಂದಿರುವ ‘ವಕ್ಫ್ ತಿದ್ದುಪಡಿ ಮಸೂದೆ–2024’ ಅನ್ನು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಕರೆದಿದೆ. ಅಲ್ಲದೇ ಅದನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದೆ.
‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪದ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿರುವ ಟಿವಿಕೆ, ಪ್ರಜಾಪ್ರಭುತ್ವದ ಧೋರಣೆಗಳಿಗೆ ವಿರುದ್ಧವಾಗಿ ಅದನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅನುಮಾನಿಸಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ರದ್ದುಗೊಳಿಸುವ ಬೇಡಿಕೆಯನ್ನು ಬೆಂಬಲಿಸಿರುವ ಅದು, ಶಿಕ್ಷಣವನ್ನು ಸಂವಿಧಾನದ ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದೆ. ‘ಜ್ಯಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯ’ ಪಕ್ಷದ ಸಿದ್ದಾಂತವಾಗಿದ್ದು, ನಮ್ಮ ಪಕ್ಷ ತಮಿಳುನಾಡಿನ ಜನರ ಸಾಮರಸ್ಯ ಮತ್ತು ಐಕ್ಯತೆಗೆ ಬದ್ಧವಾಗಿದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.