ADVERTISEMENT

ನ್ಯಾಯಾಂಗ ನಿಂದನೆ: ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ

ಪಿಟಿಐ
Published 11 ಜುಲೈ 2022, 8:26 IST
Last Updated 11 ಜುಲೈ 2022, 8:26 IST
   

ನವದೆಹಲಿ: ₹ 9,000 ಕೋಟಿಗೂ ಅಧಿಕ ಸಾಲ ಮಾಡಿವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 4 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

2017ರಲ್ಲಿ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಆರೋಪದಡಿ ತಪ್ಪಿತಸ್ಥರೆಂದು ಸಾಬೀತಾದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆ ಮತ್ತು ₹ 2000 ದಂಡ ವಿಧಿಸಿದೆ.

ಇದೇ ವೇಳೆ, ನ್ಯಾಯಾಲಯದ ಆದೇಶ ಮೀರಿ ವರ್ಗಾವಣೆಯಾಗಿರುವ 40 ಮಿಲಿಯನ್ ಡಾಲರ್ ಹಣವನ್ನು ನಾಲ್ಕು ವಾರಗಳಲ್ಲಿಬಡ್ಡಿ ಸಮೇತಹಿಂದಿರುಗಿಸುವಂತೆ ಕೋರ್ಟ್ ಮಲ್ಯ ಕುಟುಂಬ ವರ್ಗದವರಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10ರಂದು ಮದ್ಯದ ದೊರೆ ವಿರುದ್ಧದ ಆದೇಶವನ್ನು ಕಾಯ್ದಿರಿಸಿತ್ತು.

ADVERTISEMENT

ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರ ವಾದ ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

ಆದರೆ, ಬ್ರಿಟನ್‌ನಲ್ಲಿರುವ ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ವಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಯ ಪರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.