ದೆಹಲಿ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಕಳೆದ ಆರು ತಿಂಗಳಲ್ಲಿ ಬಿಜೆಪಿಯು ಅಧಿಕಾರದಿಂದ ಕೆಳಗಿಳಿಸಿದ ನಾಲ್ಕನೇ ಮುಖ್ಯಮಂತ್ರಿ ವಿಜಯ್ ರೂಪಾನಿ ಎನಿಸಿಕೊಂಡಿದ್ದಾರೆ.
ಉತ್ತರಾಖಂಡ, ಕರ್ನಾಟಕ ಮತ್ತು ಗುಜರಾತ್ ನಲ್ಲಿ ಕಳೆದ ಆರು ತಿಂಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿರುವ ಬಿಜೆಪಿ, ನಾಲ್ಕು ನಾಯಕರನ್ನು ಕೆಳಗಿಳಿಸಿದೆ.
ಈ ವರ್ಷದ ಮಾರ್ಚ್‌ನಲ್ಲಿ ಉತ್ತರಾಖಂಡದ ಆಗಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸಿ ಲೋಕಸಭಾ ಸದಸ್ಯ ತಿರತ್ ಸಿಂಗ್ ರಾವತ್ ಅವರನ್ನು ಬಿಜೆಪಿಯು ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ತಿರತ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳಾಗಿರಲಿಲ್ಲ. ಅಷ್ಟರಲ್ಲೇ ಅವರನ್ನೂ ಕೆಳಗಿಳಿಸಲಾಯಿತು. ತಿರತ್ ಸಿಂಗ್ ರಾವತ್ ಬದಲಿಗೆ ಎರಡು ಬಾರಿಯ ಶಾಸಕ ಪುಷ್ಕರ್ ಸಿಂಗ್ ಧಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಉತ್ತರಾಖಂಡದ ನಂತರ, ಕರ್ನಾಟಕದಲ್ಲಿ ಬಿಜೆಪಿಯು ಮಹತ್ವದ ಹೆಜ್ಜೆ ಇಟ್ಟು, ಬಿ ಎಸ್ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.
ಹೊಸ ನಾಯಕತ್ವವನ್ನು ಮುನ್ನೆಲೆಗೆ ತರಲು ಗುಜರಾತ್ ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ’ಕರ್ನಾಟಕದಲ್ಲಿ, ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ತೀವ್ರ ಅಸಮಾಧಾನವಿತ್ತು. ಅದೇ ರೀತಿ ರೂಪಾನಿಯನ್ನು ತೆಗೆದುಹಾಕಲು ಗುಜರಾತ್ ಘಟಕದಲ್ಲಿ ಬೇಡಿಕೆ ಇತ್ತು. ರೂಪಾನಿ ನಾಯಕತ್ವದಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಗೆಲ್ಲುವುದು ಕಷ್ಟ’ ಎಂದು ಅವರು ಹೇಳಿದರು.
ಉತ್ತರಾಖಂಡದಲ್ಲಿ ಮೊದಲಿಗೆ ತ್ರಿವೇಂದ್ರ ಸಿಂಗ್ ರಾವತ್ ಬದಲಿಗೆ ತಿರತ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಆದರೆ, ಅವರು ಆರು ತಿಂಗಳ ಒಳಗಾಗಿ ರಾಜ್ಯ ವಿಧಾನಸಭೆಗೆ ಚುನಾಯಿತರಾಗಲು ವಿಫಲರಾದ ಕಾರಣ ಅವರನ್ನು ಕೆಳಗಿಳಿಸಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಸಿಎಂ ಮಾಡಲಾಯಿತು.
ನಾಯಕತ್ವ ಬದಲಾವಣೆಗೂ ಮುನ್ನವೇ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಇಷ್ಟು ದಿನ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದವು. ಆದರೆ, ಗುಜರಾತ್‌ನಲ್ಲಿ ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆ ನಡೆದಿದೆ. ಸದ್ದಿಲ್ಲದೇ ರೂಪಾನಿ ಅವರನ್ನು ಕೆಳಗಿಳಿಸಲಾಗಿದೆ. ’ಮುಖ್ಯಮಂತ್ರಿಯನ್ನು ಬದಲಿಸಲು ಪಕ್ಷದ ಒಂದು ಬಣದಿಂದ ಚರ್ಚೆ ಮತ್ತು ಬೇಡಿಕೆ ಇದ್ದಿದ್ದು ನಿಜ. ಆದರೆ, ಈ ರೀತಿ ಸುದ್ದಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಜೀನಾಮೆ ಸಲ್ಲಿಸಿದ ಬಳಿಕವೇ ಆ ಸುದ್ದಿ ತಿಳಿಯಿತು. ಅಲ್ಲಿವರೆಗೆ ನಮಗೆ ವಿಚಾರವೇ ಗೊತ್ತಿರಲಿಲ್ಲ,‘ ಎಂದು ಗುಜರಾತ್‌ನ ಬಿಜೆಪಿ ನಾಯಕರೊಬ್ಬರು ಹೇಳಿದರು.
ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬದಲಿಸುವ ಮೊದಲು, ಬಿಜೆಪಿ ಇಬ್ಬರು ವೀಕ್ಷಕರನ್ನು ಸದಸ್ಯರನ್ನು ಉತ್ತರಾಖಂಡಕ್ಕೆ ಕಳುಹಿಸಿತ್ತು. ತಿರತ್ ಸಿಂಗ್ ರಾವತ್ ಅವರನ್ನು ಬದಲಿಸುವ ಮುನ್ನ, ಬಿಜೆಪಿ ಕೇಂದ್ರ ನಾಯಕತ್ವವು ಅವರನ್ನು ರಾಷ್ಟ್ರ ರಾಜಧಾನಿಗೆ ಕರೆಸಿಕೊಂಡು ಸಾಂವಿಧಾನಿಕ ಮತ್ತು ಕಾನೂನು ಬಿಕ್ಕಟ್ಟಿನ ಬಗ್ಗೆ ವಿವರಿಸಿದ್ದರು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ತಿಂಗಳುಗಳ ಕಾಲ ಊಹಾಪೋಹಗಳು ಕೇಳಿ ಬಂದಿದ್ದವು. ರಾಜೀನಾಮೆಗೂ ಮುನ್ನ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಉನ್ನತ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ರಾಜೀನಾಮೆಗೆ ಯಡಿಯೂರಪ್ಪ ಅವರು ಸಮಯವನ್ನು ತೆಗೆದುಕೊಂಡಿದ್ದರು. ಅಂತಿಮವಾಗಿ ಜುಲೈನಲ್ಲಿ ಅವರು ರಾಜೀನಾಮೆ ನೀಡಿದ್ದರು.
ಈಗ ಸದ್ದೇ ಇಲ್ಲದೇ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದು, ಅಚ್ಚರಿ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.