ADVERTISEMENT

ಭಾನುವಾರ ವಿಕ್ರವಾಂಡಿಯಲ್ಲಿ ವಿಜಯ್‌ ನೇತೃತ್ವದ ಟಿವಿಕೆಯ ಮೊದಲ ಸಮಾವೇಶ

ನಟ ವಿಜಯ್‌ ನೇತೃತ್ವದ ಪಕ್ಷ * ನೀತಿ, ಸಿದ್ಧಾಂತ ಪ್ರಕಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:31 IST
Last Updated 25 ಅಕ್ಟೋಬರ್ 2024, 16:31 IST
ವಿಜಯ್‌
ವಿಜಯ್‌   

ಚೆನ್ನೈ: ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ತಮಿಳಿನ ಖ್ಯಾತ ನಟ, ರಾಜಕಾರಣಿ ದಳ‍ಪತಿ ವಿಜಯ್‌ (50) ತನ್ನ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮ್ಮೇಳನವನ್ನು ಇದೇ 27ರಂದು (ಭಾನುವಾರ) ವಿಕ್ರವಾಂಡಿಯಲ್ಲಿ ಆಯೋಜಿಸಿದ್ದಾರೆ.

ರಾಜಕೀಯ ಗುರಿ ಸಾಧಿಸುವಲ್ಲಿ ವಿಜಯ್‌ ಅವರ ಮೊದಲ ಹೆಜ್ಜೆ ಎಂದು ಈ ಸಮ್ಮೇಳನವನ್ನು ಬಣ್ಣಿಸಲಾಗುತ್ತಿದೆ.

ಸಮ್ಮೇಳನ ಪ್ರಯುಕ್ತ ತಮ್ಮ ಬೆಂಬಲಿಗರಿಗೆ ಪತ್ರ ಬರೆದಿರುವ ವಿಜಯ್‌, ತಮಿಳುನಾಡಿನ ಉತ್ತರ ಭಾಗದಲ್ಲಿ ನಡೆಯುತ್ತಿರುವ ರ್‍ಯಾಲಿಯಲ್ಲಿ ರಾಜಕೀಯ ಶಿಸ್ತು ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಈ ಭಾಗವು ಡಿಎಂಕೆ ಮತ್ತು ಅದರ ಮಿತ್ರ ಪಕ್ಷ ವಿಸಿಕೆಯ ಭದ್ರಕೋಟೆಯಾಗಿದ್ದು, ರಾಜಕೀಯವಾಗಿ ನಿರ್ಣಾಯಕ ಪ್ರದೇಶವಾಗಿದೆ.

ADVERTISEMENT

ಈ ವರ್ಷದ ಫೆಬ್ರುವರಿ 2ರಂದು ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಿದ್ದ ವಿಜಯ್‌, ಈ ಮೂಲಕ ರಾಜಕೀಯ ಪ್ರವೇಶವನ್ನು ಘೋಷಿಸಿದ್ದರು. ಇದೇ ಮೊದಲ ಬಾರಿಗೆ ನಟ ವಿಜಯ್‌ ರಾಜಕೀಯ ಭಾಷಣ ಮಾಡಲಿದ್ದು, ಅದರಲ್ಲಿ ಪಕ್ಷದ ಸಿದ್ಧಾಂತ ಮತ್ತು ನೀತಿಗಳನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ. ಈ ಮೂಲಕ ತಮಿಳುನಾಡನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುವ ಸಾಧ್ಯತೆ ಇದೆ.

ಚೆನ್ನೈನಿಂದ 150 ಕಿ.ಮೀ ದೂರದಲ್ಲಿರುವ ವಿಕ್ರವಾಂಡಿಯಲ್ಲಿ ಭಾನುವಾರ ನಡೆಯಲಿರುವ ಸಮಾವೇಶಕ್ಕೆ ತಮಿಳುನಾಡು ಮತ್ತು ನೆರೆ ರಾಜ್ಯಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಮತ್ತು ಅಭಿಮಾನಿಗಳು ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಯಶಸ್ವಿ ನೀತಿಗಳ ಮೂಲಕ ತಮಿಳುನಾಡಿನ ಜನರಿಗಾಗಿ ದುಡಿಯುವ ಪ್ರತಿಜ್ಞೆ ಮಾಡೋಣ. 2026ರ (ವಿಧಾನಸಭಾ ಚುನಾವಣೆ) ಗುರಿಯತ್ತ ನಮ್ಮ ಮೊದಲ ಹೆಜ್ಜೆ ಇಡೋಣ’ ಎಂದು ವಿಜಯ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.