ನವದೆಹಲಿ: ಮಹಾರಾಷ್ಟ್ರದ ಔರಂಗಾಬಾದ್ ಮೂಲದ ವಿಜಯಾ ರಾಹಟಕರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆಯನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಇತ್ತೀಚೆಗೆ ರೇಖಾ ಶರ್ಮಾ ಅವರ ರಾಜೀನಾಮೆಯಿಂದ ಈ ಹುದ್ದೆ ತೆರವಾಗಿತ್ತು.
ಈ ಕುರಿತು ತಮ್ಮ ಎಕ್ಸ್ ತಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿ ಪೋಸ್ಟ್ ಮಾಡಿರುವ ವಿಜಯಾ ಅವರು, ದೇಶದ ಮಹಿಳೆಯರ ಸುರಕ್ಷತೆ, ಸಬಲೀಕರಣಕ್ಕೆ ಕಂಕಣಬದ್ಧರಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಪುಣೆ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ವಿಜಯಾ ಅವರು, 2016ರಿಂದ 2021ರವರೆಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಇವರು 2007ರಿಂದ 2010 ರ ಅವಧಿಯಲ್ಲಿ ಔರಂಗಾಬಾದ್ (ಈಗ ಛತ್ರಪತಿ ಸಂಭಾಜಿನಗರ) ನಗರ ಪಾಲಿಕೆಯ ಮೇಯರ್ ಆಗಿದ್ದರು. ವಿಜಯಾ ಅವರ ಅಧಿಕಾರದ ಅವಧಿ ಮೂರು ವರ್ಷ ಇರಲಿದೆ.
ಇದರೊಂದಿಗೆ ಅರ್ಚನಾ ಮಜುಂದಾರ್ ಎನ್ನುವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.