ಬೆಂಗಳೂರು: ಇಂದು (ಶನಿವಾರ) ದೇಶದಾದ್ಯಂತ ಸಂಭ್ರಮದ ವಿಜಯದಶಮಿ ಆಚರಿಸಲಾಗುತ್ತಿದೆ. ಸಡಗರದ ವಿಜಯದಶಮಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭಾಶಯ ತಿಳಿಸಿದ್ದಾರೆ.
ದೇಶದ ಜನತೆಗೆ ಶುಭಾಶಯ ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ವಿಜಯದಶಮಿಯ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇದು ಅನ್ಯಾಯದ ವಿರುದ್ಧ ನ್ಯಾಯದ ವಿಜಯದ ಹಬ್ಬವಾಗಿದೆ. ಈ ಹಬ್ಬವು ಸತ್ಯ ಮತ್ತು ನೈತಿಕತೆಯ ಮೌಲ್ಯಗಳಲ್ಲಿ ನಮ್ಮ ನಂಬಿಕೆಯ ಸಂಕೇತವಾಗಿದೆ. ಈ ಸುಸಂದರ್ಭದಲ್ಲಿ ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲೂ ನ್ಯಾಯದ ಪರವಾಗಿ ನಿಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ನಮ್ಮ ದೇಶವು ಯಾವಾಗಲೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ನಾನು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ದುರ್ಗಾ ಮಾತೆ ಮತ್ತು ಪ್ರಭು ಶ್ರೀರಾಮನ ಆಶೀರ್ವಾದದಿಂದ ನೀವೆಲ್ಲರೂ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಜಯ ಸಾಧಿಸಬೇಕೆಂದು ನಾನು ಬಯಸುತ್ತೇನೆ. ವಿಜಯದಶಮಿಯು ದುರ್ಗಾ ಪೂಜೆಯ ಕೊನೆಯ ದಿನವಾಗಿದೆ ಮತ್ತು ರಾಕ್ಷಸ ದೊರೆ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಸ್ಮರಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಶುಭ ಹಾರೈಸಿದ್ದಾರೆ.
‘ಅನ್ಯಾಯದ ಮೇಲೆ ನ್ಯಾಯ ಮತ್ತು ಅಸತ್ಯದ ಮೇಲೆ ಸತ್ಯದ ವಿಜಯದ ಮಹಾ ಹಬ್ಬ ವಿಜಯದಶಮಿಯಂದು ಸಮಸ್ತ ನಾಡಿನ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಈ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ ಜನರಿಗೆ ಶುಭ ಕೋರಿದ್ದಾರೆ.
‘ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಗೆಲುವಿನ ಸಂದೇಶ ಸಾರುವ ವಿಜಯದಶಮಿ, ಸುಳ್ಳು, ಅನ್ಯಾಯ ಮತ್ತು ಅಧರ್ಮದ ವಿರುದ್ಧ ಧೈರ್ಯದಿಂದ ದನಿ ಎತ್ತಲು ಪ್ರೇರಣೆಯಾಗಲಿ. ಶಾಂತಿ, ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಬೆಳಕು ಎಲ್ಲೆಡೆ ಪಸರಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ನಾಡಬಾಂಧವರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಆಯುರಾರೋಗ್ಯ, ಸುಖ ಶಾಂತಿ ನೆಮ್ಮದಿ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಶುಭಾಶಯ ತಿಳಿಸಿದ್ದಾರೆ.
‘ಕನ್ನಡ ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಶ್ರೀ ಚಾಮುಂಡೇಶ್ವರಿಯ ಕೃಪಾಶಿರ್ವಾದ ಎಲ್ಲರ ಮೇಲಿರಲಿ. ಈ ಬಾರಿ ದಸರಾ, ಮತ್ತಷ್ಟು ಸುಂದರ!’ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.