ಚೆನ್ನೈ: ‘ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ನಮ್ಮ ಪಕ್ಷದ ಮತಗಳನ್ನು ಕಸಿಯದು’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಂಗಳವಾರ ಹೇಳಿದ್ದಾರೆ.
‘ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2026ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮೈತ್ರಿಗೆ ನಾವು ಕರೆ ನೀಡಲಿದ್ದೇವೆ’ ಎಂದೂ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
‘ಅವರು (ವಿಜಯ್) ಎಐಎಡಿಎಂಕೆ ಮತಗಳನ್ನು ಕಸಿದುಕೊಳ್ಳುವುದಿಲ್ಲ. ನಾವು ಯಾವತ್ತೂ ನಮ್ಮ ಸಿದ್ಧಾಂತವನ್ನು ಬಿಟ್ಟುಕೊಟ್ಟಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಮೈತ್ರಿ ಬಗ್ಗೆ ಮಾತನಾಡಲು ಕಾಲ ಪಕ್ವವಾಗಿಲ್ಲ. ರಾಜಕೀಯ ಸಂದರ್ಭಗಳಿಗೆ ಅನುಗುಣವಾಗಿ ಚುನಾವಣೆಗೂ ಮುನ್ನ ಮೈತ್ರಿ ನಡೆಯುತ್ತವೆ’ ಎಂದು ಅವರು ಹೇಳಿದರು.
ಬೆಂಬಲಿಗರಿಗೆ ಕೃತಜ್ಞತಾ ಪತ್ರ ಬರೆದ ನಟ: ಏತನ್ಮಧ್ಯೆ, ಭಾನುವಾರ ವಿಕ್ರವಾಂಡಿಯಲ್ಲಿ ನಡೆದ ರ‍್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ತಮ್ಮ ಬೆಂಬಲಿಗರಿಗೆ ವಿಜಯ್ ಧನ್ಯವಾದಗಳನ್ನು ಅರ್ಪಿಸಿ ನಾಲ್ಕು ಪುಟಗಳ ಪತ್ರವನ್ನು ಬರೆದಿದ್ದಾರೆ.
‘ಅಭಿಮಾನಿಗಳಿಗೆ ಪತ್ರಗಳನ್ನು ಬರೆಯುವುದು ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರು ತಮಿಳುನಾಡಿಗೆ ನೀಡಿದ ‘ಉತ್ತಮ ರಾಜಕೀಯ ಸಾಧನ’ ಮತ್ತು ಅವರ ಆದರ್ಶಗಳನ್ನು ಎಲ್ಲರೂ ಇಷ್ಟಪಡುತ್ತಾರೆ’ ಎಂದು ಪತ್ರದಲ್ಲಿ ವಿಜಯ್ ಉಲ್ಲೇಖಿಸಿದ್ದಾರೆ.
‘ನಮ್ಮ ಸಮ್ಮೇಳನ ತಮಿಳುನಾಡಿನ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸಮ್ಮೇಳನದಿಂದ ಹೊರಹೊಮ್ಮಿದ ಚಿತ್ರಣಗಳು ನಮ್ಮ ಹಾದಿಯಲ್ಲಿ ವಿಜಯವನ್ನು ಸೂಚಿಸುತ್ತವೆ. ಸಮ್ಮೇಳನದ ನಂತರ, ಜನರು ನಮ್ಮನ್ನು ಹೆಚ್ಚು ಟೀಕಿಸುತ್ತಾರೆ ಎಂಬುದು ನನ್ನ ನಿರೀಕ್ಷೆ. ನಾವು ರಚನಾತ್ಮಕ ಸಲಹೆಯನ್ನು ಮಾತ್ರ ಗಂಭೀರವಾಗಿ ತೆಗೆದುಕೊಳ್ಳಬೇಕು. 2026ರ ವಿಧಾನಸಭಾ ಚುನಾವಣೆ ತಮ್ಮ ಪಕ್ಷದ ಗುರಿಯಾಗಿದೆ. ಕಾರ್ಯಕರ್ತರು ಜನರಿಗಾಗಿ ಕೆಲಸ ಮಾಡುವತ್ತ ಮಾತ್ರ ಗಮನಹರಿಸಬೇಕು. ನಾವು ಒಟ್ಟಾಗಿ ಕೆಲಸ ಮಾಡೋಣ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಭಾನುವಾರ ತಮ್ಮ ಪಕ್ಷ ಟಿವಿಕೆಯನ್ನು ಪ್ರಾರಂಭಿಸಿದ ವಿಜಯ್, ಡಿಎಂಕೆ ಮತ್ತು ಬಿಜೆಪಿಯನ್ನು ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ಶತ್ರುಗಳೆಂದು ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.