ಇಂದೋರ್ (ಪಿಟಿಐ): ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಅವರ ಮಗ ಹಾಗೂ ಮಧ್ಯಪ್ರದೇಶದ ಶಾಸಕ ಆಕಾಶ್ ವಿಜಯವರ್ಗೀಯ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಆಕಾಶ್ ಹಾಗೂ ಇತರ 10 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಒತ್ತುವರಿ ತೆರವು ಪ್ರಶ್ನಿಸಿಸ್ಥಳೀಯ ನಗರಸಭೆಯ ಅಧಿಕಾರಿಯೊಬ್ಬರ ಜೊತೆ ವಾಗ್ವಾದಕ್ಕಿಳಿದ ಅವರು, ಕ್ರಿಕೆಟ್ ಬ್ಯಾಟ್‌ನಿಂದ ಥಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಆಕಾಶ್, ‘ಮೊದಲು ಮನವಿ, ನಂತರ ದಾಳಿ’ ಎಂಬುದನ್ನು ಬಿಜೆಪಿಯಲ್ಲಿ ಕಲಿಸಿಕೊಡಲಾಗಿದೆ’ ಎಂದಿದ್ದಾರೆ. ಶಿಥಿಲಗೊಂಡಿವೆ ಎಂಬ ಕಾರಣಕ್ಕೆ ಸುಸ್ಥಿತಿಯಲ್ಲಿರುವ ಮನೆಗಳನ್ನೂ ನೆಲಸಮ ಮಾಡಲು ಅಧಿ
ಕಾರಿಗಳು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮನೆ ನೆಲಸಮ ವಿರೋಧಿಸಿ ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಆಕಾಶ್ ಭಾಗಿಯಾಗಿದ್ದರು. ಸ್ಥಳದಿಂದ ಹೊರಡದಿದ್ದರೆ, ಮುಂದಿನ ಪರಿಣಾಮ ಸರಿಯಿರುವುದಿಲ್ಲ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಕೆಯನ್ನೂ ನೀಡಿದ್ದರು. ಜೆಸಿಬಿ ಯಂತ್ರದ ಕೀಲಿಯನ್ನು ಅವರ ಬೆಂಬಲಿಗರು ಕಿತ್ತುಕೊಂಡಿದ್ದರು.
ವಾಗ್ವಾದ ತಾರಕಕ್ಕೇರಿದಾಗ ಬ್ಯಾಟ್ ಕೈಗೆತ್ತಿಕೊಂಡು ಅಧಿಕಾರಿಯನ್ನು ಥಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಾಸಕರ ಬೆಂಬಲಿಗರೂ ದಾಳಿ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಯನ್ನು ಖಂಡಿಸಿ ಇಂದೋರ್ ನಗರಸಭೆ ಸಿಬ್ಬಂದಿ ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಅಧಿಕಾರಿ ಮೇಲಿನ ಹಲ್ಲೆಯನ್ನು ಕಾಂಗ್ರೆಸ್ ವಕ್ತಾರ ನೀಲಭ್ಶುಕ್ಲಾ ಖಂಡಿಸಿದ್ದಾರೆ.‘ಕಾನೂನು ರೂಪಿಸುವವರೇ ಕಾನೂನು ಉಲ್ಲಂಘಿಸಿದ್ದಾರೆ. ಬಿಜೆಪಿಯ ನೈಜ ಮುಖವನ್ನು ಈ ಘಟನೆ ಬಯಲುಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.