ಕಾನ್ಪುರ:ಎಂಟು ಪೊಲೀಸರ ಹತ್ಯೆಯ ಆರೋಪಿಯಾಗಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಶುಕ್ರವಾರ ಬೆಳಗ್ಗೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.
‘ದುಬೆಯನ್ನು ಕರೆದೊಯ್ಯುತ್ತಿದ್ದ ಕಾರು ಕಾನ್ಪುರ ಹೊರವಲಯದ ಭೌಂತಿ ಎಂಬಲ್ಲಿ ಮಗುಚಿತು. ಅಪಘಾತದಲ್ಲಿ ಗಾಯಗೊಂಡ ಪೊಲೀಸ್ ಒಬ್ಬರ ಪಿಸ್ತೂಲ್ ಕಸಿದುಕೊಂಡ ದುಬೆ ಪರಾರಿಯಾದ. ಶರಣಾಗುವಂತೆ ಹೇಳಿದರೂ, ಲಕ್ಷ್ಯ ಕೊಡದ ಆತ ಪೊಲೀಸರನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿದ. ಹಾಗಾಗಿ, ಸ್ವರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ದುಬೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟ’ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆಸ್ಪತ್ರೆಗೆ ದಾಖಲಿಸುವುದಕ್ಕೆ ಮೊದಲೇ ದುಬೆ ಮೃತಪಟ್ಟಿದ್ದ.ಆತನ ಎದೆಗೆ ಮೂರು ಮತ್ತು ಕೈಗೆ ಒಂದು ಗುಂಡು ಹೊಕ್ಕಿದ್ದವು ಎಂದು ಆತನನ್ನು ದಾಖಲಿಸಲಾಗಿದ್ದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಬಿ. ಕಮಲ್ ಹೇಳಿದ್ದಾರೆ. ಪೊಲೀಸರ ವಿವರಣೆಯು ನಂಬುವಂತಹುದಲ್ಲ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಉತ್ತರ ಪ್ರದೇಶದ ವಿರೋಧ ಪಕ್ಷಗಳು ಹೇಳಿವೆ.
'ಎನ್‌ಕೌಂಟರ್‌ನಲ್ಲಿ ವಿಕಾಸ್ ದುಬೆ ಗಾಯಗೊಂಡಿದ್ದ ಹಾಗೂ ಆತ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ಘೋಷಿಸಲಾಗಿದೆ' ಎಂದು ಕಾನ್ಪುರ ವಲಯದ ಎಡಿಜಿ ಜೆ.ಎನ್.ಸಿಂಗ್ ಹೇಳಿದ್ದಾರೆ.
ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ವಾಹನ ಪಲ್ಟಿಯಾಯಿತು. ಅಪಘಾತದ ಬಳಿಕ ದುಬೆ ಪೊಲೀಸ್ ವಿಶೇಷ ತಂಡದ ಸಿಬ್ಬಂದಿಯಿಂದ ಪಿಸ್ತೂಲ್ ಕಸಿದಿದ್ದಾನೆ. ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆ ಪೊಲೀಸರು ಸುತ್ತವರಿದಿದ್ದಾರೆ. ಅದೇ ವೇಳೆ ಗುಂಡಿನ ಚಕಮಕಿ ನಡೆದು, ದುಬೆ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದುಬೆಯನ್ನು ಬಂಧಿಸುವುದಕ್ಕಾಗಿಜುಲೈ 2 ರಂದು ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮಕ್ಕೆ ಹೋಗಿದ್ದ ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆದು ಎಂಟು ಮಂದಿ ಪೊಲೀಸರು ಹತರಾಗಿದ್ದರು. ಪ್ರಮುಖ ಆರೋಪಿ ದುಬೆ ಬಳಿಕ ತಲೆಮರೆಸಿಕೊಂಡಿದ್ದ.ದುಬೆನನ್ನು ಬಂಧಿಸಲು ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.ಈತನನ್ನು ಮಧ್ಯಪ್ರದೇಶ ಪೊಲೀಸರು ಉಜ್ಜಯಿನಿಯ ಮಹಾಕಾಲ ದೇವಾಲಯದ ಹೊರಭಾಗದಿಂದ ಗುರುವಾರ ಬಂಧಿಸಿದ್ದರು. ಅಲ್ಲಿಂದ ಆತನನ್ನು ಕಾನ್ಪುರಕ್ಕೆ ಕರೆತರಲಾಗಿತ್ತು.
ವಿಕಾಸ್ ದುಬೆ ಬಂಧನವಾಗಿ ಕೆಲವೇ ಗಂಟೆಗಳಲ್ಲಿ ಪತ್ನಿ, ಮಗ ಹಾಗೂ ಒಬ್ಬ ಸಹಾಯಕನನ್ನೂ ಉತ್ತರ ಪ್ರದೇಶ ಪೊಲೀಸ್ ವಿಶೇಷ ತಂಡ ಬಂಧಿಸಿತ್ತು.
ವಿಕಾಸ್ ದುಬೆ ಸತ್ತಿದ್ದಾನೆ ಎಂಬ ಸುದ್ದಿ ಬಿತ್ತರಗೊಂಡ ಕೆಲವೇ ಕ್ಷಣಗಳಲ್ಲಿ ಟ್ವಿಟರ್‌ನಲ್ಲಿ #vikasDubeyEncounter ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. 'ಇದು ನಕಲಿ ಎನ್‌ಕೌಂಟರ್'. 'ಕಾನ್ಪುರ ಪೊಲೀಸರು ಹೆಣೆದ ಅದ್ಭುತ ನಾಟಕ' ಎಂದು ಹಲವರು ಹೇಳಿದ್ದಾರೆ.
'ವಿಕಾಸ್ ದುಬೆಗೆ ಉನ್ನತ ಹಂತದ ಪೊಲೀಸರು ಮತ್ತು ಹಿರಿಯ ರಾಜಕಾರಿಣಿಗಳ ಒಡನಾಟವಿತ್ತು. ಆತನ ವಿಚಾರಣೆ ನಡೆದಿದ್ದರೆ ಅವರೆಲ್ಲರ ಹುಳುಕು ಹೊರಗೆ ಬರುತ್ತಿದ್ದವು. ಇದನ್ನು ತಡೆಯಲೆಂದೇ ಪೊಲೀಸರು ವಿಕಾಸ್‌ದುಬೆಯನ್ನು ಕೊಲ್ಲಲಾಗಿದೆ' ಎಂಬ ಟೀಕೆಯೂ ವ್ಯಕ್ತವಾಗಿದೆ.
ಹತ್ಯೆ ಪೂರ್ವಯೋಜಿತವೇ?
ದುಬೆಯ ಹತ್ಯೆ ಆಗದಂತೆ ನೋಡಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಗುರುವಾರ ರಾತ್ರಿ ಸಲ್ಲಿಕೆಯಾಗಿತ್ತು. ದುಬೆಯ ಹತ್ಯೆಯಾಗುವ ಸಾಧ್ಯತೆ ಇದೆ ಎಂಬ ಅರ್ಥದಲ್ಲಿ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರೀಕ್ಷಕ (ನಾಗರಿಕ ರಕ್ಷಣೆ) ಅಮಿತಾಭ್ ಠಾಕೂರ್ ಟ್ವೀಟ್ ಮಾಡಿದ್ದರು.
ದುಬೆ ವಿರುದ್ಧ ಈವರೆಗೆ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಕೊಲೆ, ದರೋಡೆ, ಸುಲಿಗೆ, ಅಪಹರಣದಂತಹ ಪ್ರಕರಣಗಳು ಇದರಲ್ಲಿ ಸೇರಿವೆ. 20 ವರ್ಷಗಳ ಹಿಂದೆ ಪೊಲೀಸ್ ಠಾಣೆಗೆ ನುಗ್ಗಿ ಬಿಜೆಪಿ ಶಾಸಕರೊಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸಿದ್ದ. ಆದರೆ, ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆಯಾಗಿದ್ದ.
ದುಬೆಯ ಇಬ್ಬರು ಸಹಚರರನ್ನು ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 8 ಮಂದಿ ಪೊಲೀಸರ ಹತ್ಯೆ ಮಾಡಿದ ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.