ಮೇರಠ್: ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಪೊಲೀಸರನ್ನು ಗ್ರಾಮಸ್ಥರು ಒತ್ತೆಯಾಳುಗಳಾಗಿರಿಸಿಕೊಂಡು ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಿತ್‌ಗಢ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸತ್ಯೇಂದ್ರ ಹಾಗೂ ಪ್ರಶಿಕ್ಷಣಾರ್ಥಿ ಸಬ್ ಇನ್‌ಸ್ಪೆಕ್ಟರ್ ಶಿವಂ ಅವರನ್ನು ಗೋವಿಂದಪುರಿ ಗ್ರಾಮಸ್ಥರು ಶನಿವಾರ ರಾತ್ರಿ ಒತ್ತೆಯಾಳುಗಳಾಗಿರಿಸಿಕೊಂಡು ಥಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿವಿಧ ಪೊಲೀಸ್ ಠಾಣೆಯ ಆರಕ್ಷಕ ಪಡೆ ಸ್ಥಳಕ್ಕೆ ದೌಡಾಯಿಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವೇಳೆ ಪೊಲೀಸರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಸತ್ಯೇಂದ್ರ ಅವರು ಅಂಗಡಿ ಮಾಲೀಕರನ್ನು ಹಣ ಕೊಡುವಂತೆ ಹೆದರಿಸುತ್ತಿದ್ದರು. ಕೊಡದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆಯನ್ನೂ ಒಡ್ಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಲ್ಲದೆ ಇಬ್ಬರನ್ನೂ ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವೃತ್ತ ಪೊಲೀಸ್ ಅಧಿಕಾರಿ ನವಿನಾ ಶುಕ್ಲಾ ಅವರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ, ಇಬ್ಬರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಗ್ರಾಮಸ್ಥರು ಸುಲಿಗೆ ಆರೋಪ ಮಾಡಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ವೃತ್ತ ಪೊಲೀಸ್ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.