ADVERTISEMENT

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ

ಪಿಟಿಐ
Published 6 ಸೆಪ್ಟೆಂಬರ್ 2024, 10:35 IST
Last Updated 6 ಸೆಪ್ಟೆಂಬರ್ 2024, 10:35 IST
   

ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ನಾಯಕರಾದ ಪವನ್ ಖೇರಾ, ಹರಿಯಾಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಉದಯ್ ಭಾನ್, ಹರಿಯಾಣದ ಎಐಸಿಸಿ ಉಸ್ತುವಾರಿ ದೀಪಕ್ ಬಾಬರಿಯಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರೂ ಸ್ಪರ್ಧಿಸುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ಅವರು, ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರ 10 ರಾಜಾಜಿ ಮಾರ್ಗ್ ನಿವಾಸದಲ್ಲೇ ಖರ್ಗೆ ಅವರು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ADVERTISEMENT

ವೈಯಕ್ತಿಕ ಕಾರಣ ನೀಡಿ ಫೋಗಟ್ ಇಂದು ರೈಲ್ವೆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ವಿನೇಶ್ ಮತ್ತು ಪೂನಿಯಾ ಭೇಟಿ ಮಾಡಿದ್ದರು. ಚಿತ್ರಗಳನ್ನು ಕಾಂಗ್ರೆಸ್ ತನ್ನ ಎಕ್ಸ್ ಪುಟದಲ್ಲಿ ಹಂಚಿಕೊಂಡಿತ್ತು.

ಪೂನಿಯಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ದೇಶದ ಮೊದಲ ಕುಸ್ತಿಪಟುವಾಗಿದ್ದಾರೆ. ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಫೋಗಟ್ ಅವರನ್ನು 100 ಗ್ರಾಂ ಹೆಚ್ಚು ತೂಕ ಇದ್ದಿದ್ದರಿಂದ ಅನರ್ಹಗೊಳಿಸಲಾಗಿತ್ತು.

ಬಿಜೆಪಿಯ ಮಾಜಿ ಸಂಸದ ಮತ್ತು ಭಾರತ ಕುಸ್ತಿ ಫೇಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಖಂಡಿಸಿ ನಡೆದ ಹೋರಾಟದಲ್ಲಿ ವಿನೇಶ್ ಫೋಗಟ್ ಮತ್ತು ಬಜರಗ್ ಪೂನಿಯಾ ಮುಂಚೂಣಿಯಲ್ಲಿದ್ದರು.

ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ಮತ್ತು ಎಎಪಿ ನಡುಗೆ ಗಂಭೀರ ಚರ್ಚೆ ನಡೆದಿದೆ.

90 ಕ್ಷೇತ್ರಗಳ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.

ನಾನು ಹೊಸ ಇನ್ನಿಂಗ್ಸ್‌ ಶುರು ಮಾಡುತ್ತಿರುವೆ. ನಾವು ಎದುರಿಸದಂಥ  ಪರಿಸ್ಥಿತಿಯನ್ನು ಇತರ ಕ್ರೀಡಾಪಟುಗಳು ಎದುರಿಸಬಾರದು ನಾನು ಬಯಸುವೆ
–ವಿನೇಶ್‌ ಫೋಗಟ್‌ ಮಾಜಿ ಕುಸ್ತಿಪಟು

ರೈಲ್ವೆ ನೌಕರಿಗೆ ಫೋಗಟ್‌ ರಾಜೀನಾಮೆ

ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು  ರೈಲ್ವೆಯಲ್ಲಿನ ನೌಕರಿಗೆ ಶುಕ್ರವಾರ ರಾಜೀನಾಮೆ ನೀಡಿದರು.  ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ಅವರು ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಆಗಿ ಸೇವೆ ಸಲ್ಲಿಸುತ್ತಿದ್ದರು. ‘ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗಳು ಸ್ಮರಣೀಯ ಹಾಗೂ ನನ್ನ ಜೀವನದ ಹೆಮ್ಮೆಯ ಕ್ಷಣಗಳಾಗಿದ್ದವು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನೂ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅವರು ಕಾಂಗ್ರೆಸ್‌ ಸೇರ್ಪಡೆಯಾದರು.

ವಿನೇಶ್‌ಗೆ ರೈಲ್ವೆ ಇಲಾಖೆ ನೋಟಿಸ್‌

ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ್ದಕ್ಕಾಗಿ ವಿನೇಶ್‌ ಫೋಗಟ್‌ ಅವರಿಗೆ ರೈಲ್ವೆಯು ಶೋಕಾಸ್‌ ನೋಟಿಸ್‌ ನೀಡಿತ್ತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದರು. ‘ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಭೇಟಿ ಮಾಡುವುದು ಅಪರಾಧವೇ ಆಗಿದ್ದಲ್ಲಿ ರೈಲ್ವೆ ಅಧಿಕಾರಿಗಳು ಫೋಗಟ್‌ ಅವರನ್ನು ಸೇವೆಯಿಂದ ಬಿಡುಗಡೆ ಮಾಡಬೇಕಿತ್ತೆ ವಿನಃ ಈ ವಿಚಾರವಾಗಿ ರಾಜಕೀಯ ಮಾಡಬಾರದು’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಪುತ್ರಿಯಾಗಲು ಬಯಸಿದರೆ ನಾವೇಕೆ ಆಕ್ಷೇಪಿಸೋಣ: ಬಿಜೆಪಿ ಚಂಡೀಗಡ: ‘ದೇಶದ ಪುತ್ರಿಯಾಗಿದ್ದ ವಿನೇಶ್‌ ಕಾಂಗ್ರೆಸ್ ಪುತ್ರಿಯಾಗಲು ಬಯಸಿದಾಗ ನಾವು ಯಾವ ರೀತಿ ಆಕ್ಷೇಪಿಸಲು ಸಾಧ್ಯ’ ಎಂದು ಹರಿಯಾಣದ ಬಿಜೆಪಿಯ ಹಿರಿಯ ನಾಯಕ ಅನಿಲ್‌ ವಿಜ್‌ ಶುಕ್ರವಾರ ಪ್ರಶ್ನಿಸಿದ್ದಾರೆ. ‘ಮೊದಲ ದಿನದಿಂದಲೂ ಈ ಇಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸುತ್ತಿತ್ತು. ಕಾಂಗ್ರೆಸ್‌ನ ಪ್ರಚೋದನೆಯಿಂದಾಗಿಯೇ ದೆಹಲಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದರು’ ಎಂದು ವಿಜ್ ಆರೋಪಿಸಿದರು. ‘ಕಾಂಗ್ರೆಸ್‌ ಚಿತಾವಣೆ ಇರದಿದ್ದಲ್ಲಿ ಕುಸ್ತಿಪಟುಗಳ ಸಮಸ್ಯೆ ಈಗಾಗಲೇ ಬಗೆಹರಿದಿರತಿತ್ತು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.