ಚಂಡೀಗಢ: ‘2028ರ ಒಲಿಂಪಿಕ್ಸ್‌ನಲ್ಲಿ ವಿನೇಶ್ ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಹಂತದಲ್ಲಿ ಅವಳು ರಾಜಕೀಯಕ್ಕೆ ಸೇರಬಾರದಿತ್ತು’ ಎಂದು ವಿನೇಶ್ ಫೋಗಟ್ ಚಿಕ್ಕಪ್ಪ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಹೇಳಿದರು.
ವಿನೇಶ್ ಫೋಗಟ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿಸಂಸ್ಥೆ ಪಿಟಿಐನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಹಾವೀರ್, ‘ಇತ್ತೀಚೆಗಷ್ಟೇ ವಿನೇಶ್ ಜೊತೆ ಮಾತನಾಡಿದಾಗ ಆಕೆಗೆ ರಾಜಕೀಯ ಸೇರುವ ಇರಾದೆ ಇರಲಿಲ್ಲ’ ಎಂದು ತಿಳಿಸಿದರು.
‘ಅವಳು(ವಿನೇಶ್) ಕುಸ್ತಿ ಮೇಲೆ ತನ್ನ ಗಮನ ಕೇಂದ್ರೀಕರಿಸಿ 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಹಂತದಲ್ಲಿ ಅವಳು ರಾಜಕೀಯಕ್ಕೆ ಸೇರಬಾರದಿತ್ತು. ಅವಳು ಕುಸ್ತಿಯನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು.
ರಾಜಕೀಯ ಸೇರುವ ನಿರ್ಧಾರದ ಬಗ್ಗೆ ವಿನೇಶ್ ನಿಮ್ಮ ಜೊತೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ, ‘ರಾಜಕೀಯಕ್ಕೆ ಬರುವುದು ಅವಳ ನಿರ್ಧಾರ... ಈ ಕುರಿತಂತೆ ಯಾವುದೇ ಮಾತುಕತೆ ನಡೆದಿಲ್ಲ. ನನ್ನ ಕೇಳಿದ್ದರೆ ರಾಜಕೀಯ ಬೇಡ ಎನ್ನುತ್ತಿದ್ದೆ. ಆದರೆ, ಈ ದಿನಗಳಲ್ಲಿ ಮಕ್ಕಳು ಅವರಾಗಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.
ಹರಿಯಾಣದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂಬ ಕಾಂಗ್ರೆಸ್ ಹೇಳಿಕೆಗೆ, ‘ಫಲಿತಾಂಶಗಳು ಪ್ರಕಟವಾದಾಗ ನೀವು ನೋಡುತ್ತೀರಿ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾವೀರ್ ಸಿಂಗ್ ಮಗಳು ಬಬಿತಾ ಸಿಂಗ್ ಫೋಗಟ್ 2019 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.