ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಎರಡು ಪೊಲೀಸ್ ಉಪಠಾಣೆಗಳು, ಒಂದು ಅರಣ್ಯ ಇಲಾಖೆ ಕಚೇರಿ ಮತ್ತು 70 ಮನೆಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ಶನಿವಾರ ನಡೆದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯ ವರಿಷ್ಠಾಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರಾಕ್ ನದಿ ತಟದಲ್ಲಿರುವ ಚೋಟೊಬೆಕ್ರಾ ಪ್ರದೇಶದ ಉಪಠಾಣೆಗೆ ಬಂಡುಕೋರರು ಮಧ್ಯರಾತ್ರಿ 12.30ಕ್ಕೆ ಬೆಂಕಿ ಹಚ್ಚಿದರು. ಆ ಬಳಿಕ ಮೊಧುಪುರ್ ಪ್ರದೇಶದ ಲಮ್‌ತಾಯಿ ಖುನೌ ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿ ದಾಳಿ ನಡೆಸಿದರು. ಜಿರಿ ಮುಖ್ ಪೊಲೀಸ್ ಉಪಠಾಣೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿರಿಬಾಮ್‌ನಲ್ಲಿ ನಿಯೋಜಿತರಾಗಿರುವ ಭದ್ರತಾ ಸಿಬ್ಬಂದಿಗೆ ಸಹಾಯ ಮಾಡಲು 70 ಸದಸ್ಯರ ಮಣಿಪುರ ಪೊಲೀಸರ ತುಕಡಿಯೊಂದನ್ನು ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಿರಿಬಾಮ್ ಜಿಲ್ಲೆಯಲ್ಲಿ ಜನರ ಜೀವ ಮತ್ತು ಸ್ವತ್ತುಗಳನ್ನು ಕಾಪಾಡುವಂತೆ ರಾಜ್ಯ ಸರ್ಕಾರವನ್ನು ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಅಂಗೋಮ್ಚ ಬಿಮೋಲ್ ಅಕೋಯುಜಮ್ ಒತ್ತಾಯಿಸಿದ್ದಾರೆ.
‘ಜಿಲ್ಲೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ. ಪಟ್ಟಣ ಪ್ರದೇಶದಲ್ಲಿ ಭದ್ರತೆ ಒದಗಿಸಲಾಗಿದೆ. ಹೊರವಲಯಗಳಲ್ಲಿ ಇನ್ನೂ ಭದ್ರತೆ ಒದಗಿಸಲಾಗಿಲ್ಲ’ ಎಂದು ಹೇಳಿದರು.
ಜೂನ್ 6ರಂದು ಜಿರಿಬಾಮ್ ಜಿಲ್ಲೆಯಲ್ಲಿ ಬಂಡುಕೋರರು 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು
ಹತ್ಯೆಗೈದಿದ್ದರು. ಆ ಬಳಿಕ ಅಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ 239 ಜನರನ್ನು ಗ್ರಾಮಗಳಿಂದ ಸ್ಥಳಾಂತರಿಸಿ ಜಿರಿ ಪಟ್ಟಣದ ಕ್ರೀಡಾ ಸಂಕೀರ್ಣದಲ್ಲಿ ಇರಿಸಲಾಗಿದೆ. ಅದಾದ ಎರಡೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.