ADVERTISEMENT

ಪಶ್ಚಿಮ ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ: ಸಾವಿನ ಸರಣಿಗೆ ಮತ್ತೆ ಮೂವರ ಸೇರ್ಪಡೆ

ಸತ್ತವರಲ್ಲಿ ಟಿಎಂಸಿಯವರೇ ಹೆಚ್ಚು: ಮಮತಾ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಪಶ್ಚಿಮ ಬಂಗಳದ ವಿದ್ಯಾಸಾಗರ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಗೆ ಮಮತಾ ಬ್ಯಾನರ್ಜಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಪಶ್ಚಿಮ ಬಂಗಳದ ವಿದ್ಯಾಸಾಗರ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಗೆ ಮಮತಾ ಬ್ಯಾನರ್ಜಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮುಂದುವರಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇನ್ನೂ ಮೂವರು ಸಾವನ್ನಪ್ಪಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಕಾಕಿನಾರದಲ್ಲಿ ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಪೂರ್ವ ವರ್ಧಮಾನ್‌ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಒಬ್ಬ ವ್ಯಕ್ತಿಯನ್ನು ಹೊಡೆದು ಹತ್ಯೆ ಮಾಡಲಾಗಿದೆ.

ಕಾಕಿನಾರ ಘಟನೆಯಲ್ಲಿ ಸತ್ತಿರುವವರನ್ನು ಮೊಹಮ್ಮದ್‌ ಮುಕ್ತಾರ್‌ ಹಾಗೂ ಮೊಹಮ್ಮದ್‌ ಹಲೀಂ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದು ಬಿಜೆಪಿಯವರು ಕರೆತಂದಿರುವ ಬಾಡಿಗೆ ದುಷ್ಕರ್ಮಿಗಳು ಇವರ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಟಿಎಂಸಿಯ ಜಿಲ್ಲಾ ಘಟಕದ ಅಧ್ಯಕ್ಷ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಹೇಳಿದ್ದಾರೆ.

ಟಿಎಂಸಿ ಆರೋಪವನ್ನು ತಳ್ಳಿಹಾಕಿರುವ ಬೈರಕ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌, ‘ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದಿದ್ದಾರೆ.

ವರ್ಧಮಾನ್‌ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಕಾರ್ಯಕರ್ತ ಜಾಯ್‌ದೇವ್‌ ರಾಹ ಎಂಬುವವರನ್ನು ಹೊಡೆದು ಹತ್ಯೆ ಮಾಡಲಾಗಿದೆ. ‘ಜೈ ಶ್ರೀರಾಮ್‌ ಘೋಷಣೆ ಕೂಗಿದ ಕಾರಣಕ್ಕೆ ಟಿಎಂಸಿ ಕಾರ್ಯಕರ್ತರು ರಾಹ ಅವರನ್ನು ಹತ್ಯೆ ಮಾಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ವಿದ್ಯಾಸಾಗರರ ಹೊಸ ಪುತ್ಥಳಿ ಸ್ಥಾಪನೆ

ಲೋಕಸಭಾ ಚುನಾವಣೆಗೂ ಮುನ್ನ ನಡೆದ ಗಲಭೆಯ ಸಂದರ್ಭದಲ್ಲಿ ಧ್ವಂಸಗೊಂಡಿದ್ದ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿ ಇದ್ದ ಸ್ಥಳದಲ್ಲೇ ಹೊಸ ಪುತ್ಥಳಿಯನ್ನು ಮಂಗಳವಾರ ಪ್ರತಿಷ್ಠಾಪಿಸಲಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಚುನಾವಣೆಗೂ ಮುನ್ನ ನಡೆಸಿದ್ದ ರೋಡ್‌ ಶೋ ಸಂದರ್ಭದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿದ್ದ ವಿದ್ಯಾಸಾಗರರ ಪುತ್ಥಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಕೋಲ್ಕತ್ತದ ಹರೇ ಸ್ಕೂಲ್‌ ಅವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದರು. ಆ ನಂತರ ಅದನ್ನು ತೆರೆದ ಜೀಪ್‌ನಲ್ಲಿಟ್ಟು ಮೆರವಣಿಗೆಯ ಮೂಲಕ ವಿದ್ಯಾಸಾಗರ ಕಾಲೇಜಿನ ಆವರಣಕ್ಕೆ ತಂದು ಮೊದಲು ಪುತ್ಥಳಿ ಇದ್ದ ಜಾಗದಲ್ಲೇ ಪ್ರತಿಷ್ಠಾಪಿಸಲಾಯಿತು. ಹಿರಿಯ ಸಾಹಿತಿಗಳು, ಸಚಿವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗುಜರಾತ್‌ ಮಾಡಲು ಬಿಜೆಪಿ ಯತ್ನ: ಮಮತಾ ಆರೋಪ

‘ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಗಲಭೆಗಳಲ್ಲಿ ಒಟ್ಟು ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು ಅವರಲ್ಲಿ ಎಂಟು ಮಂದಿ ನಮ್ಮ ಪಕ್ಷಕ್ಕೆ (ಟಿಎಂಸಿ) ಸೇರಿದವರು. ಉಳಿದಿಬ್ಬರು ಬಿಜೆಪಿ ಕಾರ್ಯಕರ್ತರು’ ಎಂದು ಮಮತಾ ಬ್ಯಾನರ್ಜಿ ಹೇಳಿದರು.

‘ಪ್ರತಿ ಸಾವೂ ದುರ್ಭಾಗ್ಯಪೂರ್ಣವಾದುದು. ಪ್ರತಿಯೊಂದು ಘಟನೆಯ ಬಗ್ಗೆಯೂ ತನಿಖೆ ನಡೆಸಲಾಗುವುದು. ಸಾವನ್ನಪ್ಪಿರುವ ಹತ್ತು ಮಂದಿಯ ಕುಟುಂಬದವರಿಗೆ ವಿ‍ಪತ್ತು ನಿರ್ವಹಣಾ ನಿಧಿಯಿಂದ ನೆರವು ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತೇನೆ’ ಎಂದು ಮಮತಾ ಹೇಳಿದರು.

‘ಬಿಜೆಪಿಯವರು ಪಶ್ಚಿಮ ಬಂಗಾಳವನ್ನು ಗುಜರಾತ್‌ ಮಾಡಲು ಹೊರಟಿದ್ದಾರೆ. ನಾನು ಜೈಲಿಗೆ ಹೋಗಲು ಸಿದ್ಧ, ಆದರೆ ಅವರ ಯೋಜನೆ ಯಶಸ್ವಿಯಾಗಲು ಬಿಡೆನು’ ಎಂದರು.

‘ಚುನಾವಣೋತ್ತರ ಗಲಭೆಗಳಲ್ಲಿ ಸತ್ತವರ ಸಂಖ್ಯೆಯನ್ನು ವೈಭವೀಕರಿಸಿ ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ. ಅವರ ಅಭಿಪ್ರಾಯಗಳನ್ನು ಒಪ್ಪಲಾಗದು. ನಾವು ರಾಜ್ಯಪಾಲರನ್ನು ಗೌರವಿಸುತ್ತೇವೆ. ಆದರೆ ಪ್ರತಿ ಹುದ್ದೆಗೂ ಸಾಂವಿಧಾನಿಕವಾದ ಮಿತಿಗಳಿರುತ್ತವೆ’ ಎಂದು ಮಮತಾ ಹೇಳಿದರು.

‘ಮಮತಾ ಅವರ ಪ್ರಚೋದನೆಯಿಂದಲೇ ಸಂದೇಶ್‌ಖಲಿ ಗ್ರಾಮದಲ್ಲಿ ಶನಿವಾರ ಗಲಭೆ ನಡೆದು ಮೂವರು ಸಾವನ್ನಪ್ಪಿದ್ದರು’ ಎಂದು ಬಿಜೆಪಿ ಮುಖಂಡ ಮುಕುಲ್‌ ರಾಯ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.