ADVERTISEMENT

ಇನ್ನೊಬ್ಬರ ಬದುಕು ಕಸಿಯುವ ಹಕ್ಕು ಯಾರಿಗೂ ಇಲ್ಲ: ನಟಿ ಸಾಯಿ ಪಲ್ಲವಿ

ಪಿಟಿಐ
Published 19 ಜೂನ್ 2022, 19:28 IST
Last Updated 19 ಜೂನ್ 2022, 19:28 IST
ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ    

ಮುಂಬೈ: ‘ಯಾವುದೇ ರೀತಿಯ ಹಿಂಸಾಕೃತ್ಯಗಳು ಸಮರ್ಥನೀಯವಲ್ಲ. ಅಲ್ಲದೆ, ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ದೊಡ್ಡ ಪಾಪ’ ಎಂದು ಹೆಸರಾಂತ ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.

1990ರಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಇತ್ತೀಚಿನ ಗುಂಪು ದಾಳಿಗೆ ಸಂಬಂಧಿಸಿದ ಕೆಲ ಪ್ರಕರಣಗಳ ಹೋಲಿಕೆ ಕುರಿತ ತಮ್ಮ ಹೇಳಿಕೆಯು ವಿವಾದದ ಸ್ವರೂಪವನ್ನು ಪಡೆದಿರುವ ಹಿನ್ನೆಲೆಯಲ್ಲಿ ವಿಡಿಯೊ ಸಂದೇಶದಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

‘ಇನ್ನೊಬ್ಬರ ಬದುಕು ಕಸಿಯುವ ಹಕ್ಕು ನಮಗೆ ಯಾರಿಗೂ ಇಲ್ಲ. ಒಬ್ಬ ವೈದ್ಯಕೀಯ ಪದವೀಧರೆಯಾಗಿ ಎಲ್ಲರ ಜೀವ ಸಮನಾದುದು, ಎಲ್ಲರ ಬದುಕು ಮುಖ್ಯವಾದುದು ಎಂದೇ ನಾನು ನಂಬಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಭವಿಷ್ಯದಲ್ಲಿ ತನ್ನ ಗುರುತಿನ ಕಾರಣದಿಂದಾಗಿಯೇ ದೇಶದಲ್ಲಿ ಯಾರೊಬ್ಬರೂ ಭೀತಿ ಪಡುವ ಸ್ಥಿತಿ ಇರುವುದಿಲ್ಲ ಎಂದು ಆಶಿಸುತ್ತೇನೆ. ಕನಿಷ್ಠ ಆ ದಿಕ್ಕಿನಲ್ಲಿ ಸಾಗುವುದಿಲ್ಲ ಎಂದು ಭಾವಿಸುತ್ತೇನೆ. ನನಗೆ ನೆನಪಿರುವಂತೆ 14 ವರ್ಷಗಳ ನನ್ನ ಶಾಲಾ ದಿನಗಳಲ್ಲಿ ಪ್ರತಿದಿನವೂ ‘ಎಲ್ಲ ಭಾರತೀಯರು ಸಹೋದರ, ಸಹೋದರಿಯರು’ ಎಂಬುದನ್ನೇ ನಾನು ಪಠಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಇತ್ತೀಚಿನ ಸಂದರ್ಶನವೊಂದರಲ್ಲಿ ನೀವು ಎಡ ಅಥವಾ ಬಲಪಂಥೀಯರ ಬೆಂಬಲಿಗರಾ ಎಂದು ನನಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ನಾನು, ತಟಸ್ಥ ಸ್ಥಿತಿಯನ್ನು ನಂಬಿದ್ದೇನೆ. ಮೊದಲುನಾವು ಉತ್ತಮ ಮನುಷ್ಯರಾಗಬೇಕು. ಆಗ ಮಾತ್ರ ನಮ್ಮ ನಂಬಿಕೆಯೊಂದಿಗೆ ನಮ್ಮನ್ನು ಗುರುತಿಸಿಕೊಳ್ಳಬಹುದು. ತುಳಿತಕ್ಕೊಳಗಾದವರಿಗೆ ಯಾವುದೇ ಸ್ಥಿತಿಯಲ್ಲಿ ರಕ್ಷಣೆ ಸಿಗಬೇಕು ಎಂದಿದ್ದೇನೆ’ ಎಂದರು.

‘ವಿರಾಪ ಪರ್ವಂ’ ಸಿನಿಮಾದ ಬಿಡುಗಡೆಯ ಪೂರ್ವದಲ್ಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಅವರು ಪ್ರಸ್ತಾಪಿಸಿದ್ದ ಅಂಶಗಳು ಈಚೆಗೆ ವಿವಾದಕ್ಕೆ ಆಸ್ಪದವಾಗಿದ್ದವು.

ವಿವೇಕ್‌ ರಂಜನ್‌ ಅಗ್ನಿಹೋತ್ರಿ ಅವರ ‘ದ ಕಾಶ್ಮೀರಿ ಫೈಲ್ಸ್’ ಸಿನಿಮಾದಲ್ಲಿ ತೋರಿಸಿದಂತೆ ಕಾಶ್ಮೀರಿ ಪಂಡಿತರ ಸ್ಥಿತಿ ಕಂಡು ವಿಚಲಿತಳಾಗಿದ್ದೆ. ಅದೊಂದು ದುರಂತ. ನಂತರದ ಪೀಳಿಗೆಗಳ ಮೇಲೂ ಅದರ ಪರಿಣಾಮವಾಗಿದೆ ಎಂದು ನಟಿ ಹೇಳಿದರು.

‘ಇತ್ತೀಚಿಗೆ ಕೋವಿಡ್ ಸಂದರ್ಭದಲ್ಲಿ ನಡೆದಿದ್ದ ಗುಂಪು ದಾಳಿ ಘಟನೆಯೂ ನನಗೆ ಹಲವು ದಿನಗಳ ಬಾಧಿಸಿತ್ತು. ಅದರೆ, ಆನ್‌ಲೈನ್‌ನಲ್ಲಿ ಹಲವರು ಗುಂಪು ದಾಳಿ ಕೃತ್ಯ ಸಮರ್ಥಿಸಿಕೊಂಡಿದ್ದನ್ನು ಗಮನಿಸಿದಾಗಲೂ ಸಾಕಷ್ಟು ವಿಚಲಿತಳಾಗಿದ್ದೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.