ತಿರುವನಂತಪುರಂ: ವಾಹನ ಅಪಘಾತದಲ್ಲಿಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಯೋಲಿನ್ ವಾದಕ, ಮಲಯಾಳಂ ಸಿನಿಮಾ ಸಂಗೀತ ನಿರ್ದೇಶಕ ಬಾಲಭಾಸ್ಕರ್ (40) ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ.
ಸೋಮವಾರ ತಡರಾತ್ರಿ 1 ಗಂಟೆಗೆ ತಿರುವನಂತಪುರಂ ಅನಂತಪುರಿ ಆಸ್ಪತ್ರೆಯಲ್ಲಿ ಬಾಲಭಾಸ್ಕರ್ ಕೊನೆಯುಸಿರೆಳೆದಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಕಳೆದ ತಿಂಗಳು ಸೆಪ್ಟೆಂಬರ್ 25 ಮಂಗಳವಾರ ಮುಂಜಾನೆ ತಿರುವನಂತಪುರಂ ಪಳ್ಳಿಪ್ಪುರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಬಾಲಭಾಸ್ಕರ್ ಅವರ ಪುತ್ರಿ ಸಾವಿಗೀಡಾಗಿದ್ದಳು. ಬಾಲಭಾಸ್ಕರ್ ಮತ್ತು ಅವರ ಪತ್ನಿ ಲಕ್ಷ್ಮಿ, ಚಾಲಕ ಅರ್ಜುನ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವೆಂಟಿಲೇಟರ್‌ನಲ್ಲಿದ್ದ ಬಾಲಭಾಸ್ಕರ್ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿಕೊಂಡು ಬರುತ್ತಿದ್ದಂತೆ ರಾತ್ರಿ 12.57 ಗಂಟೆಗೆ ಹೃದಯಾಘಾತ ಸಂಭವಿಸಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ತ್ರಿಶ್ಶೂರಿನಲ್ಲಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಮರಳುವಾಗ ಬಾಲಭಾಸ್ಕರ್ ಕುಟುಂಬ ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದುಅಪಘಾತ ಸಂಭವಿಸಿತ್ತು.ಮುಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಭಾಸ್ಕರ್‍ಗೆ ಗಂಭೀರ ಗಾಯವಾಗಿದ್ದು, 2 ವರ್ಷದ ಮಗಳು ತೇಜಸ್ವಿಸಿ ಸ್ಥಳದಲ್ಲೇ ಮೃತ ಪಟ್ಟಿದ್ದಳು.
2000 ಇಸವಿಯಲ್ಲಿ ಬಾಲಭಾಸ್ಕರ್- ಲಕ್ಷ್ಮಿ ವಿವಾಹಿತರಾಗಿದ್ದರು. ಮದುವೆಯಾಗಿ16ವರ್ಷಗಳ ನಂತರ ಮಗಳು ತೇಜಸ್ವಿನಿ ಹುಟ್ಟಿದ್ದಳು.ತೇಜಸ್ವಿನಿ ಹೆಸರಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಈ ಕುಟುಂಬ ತ್ರಿಶ್ಶೂರಿಗೆ ಹೋಗಿತ್ತು.
ಫ್ಯೂಷನ್ ಸಂಗೀತ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದ ಬಾಲಭಾಸ್ಕರ್ ಸಿನಿಮಾ ಮತ್ತು ಹಲವಾರುಆಲ್ಬಂಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.2008ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಸಂಗೀತ್‍ಕಾರ್ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.