ADVERTISEMENT

ಮೋದಿ ಆಗಮನಕ್ಕಾಗಿ ಇಂದೋರ್‌ನಲ್ಲಿ ಪಾದಚಾರಿ ಮಾರ್ಗಗಳಿಗೆ ತಿರಂಗ? ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2023, 3:30 IST
Last Updated 9 ಜನವರಿ 2023, 3:30 IST
ಪಾದಚಾರಿ ಮಾರ್ಗಕ್ಕೆ ತಿರಂಗ ಬಳಿದಿರುವುದು
ಪಾದಚಾರಿ ಮಾರ್ಗಕ್ಕೆ ತಿರಂಗ ಬಳಿದಿರುವುದು    

ಇಂದೋರ್‌: 17ನೇ ಪ್ರವಾಸಿ ಭಾರತೀಯ ದಿನದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮಧ್ಯಪ್ರದೇಶದ ಇಂದೋರ್ ನಗರ ಸಜ್ಜಾಗಿದೆ.

ಈ ಮಧ್ಯೆ, ಹೂಡಿಕೆದಾರರು ಮತ್ತು ಎನ್‌ಆರ್‌ಐ ಶೃಂಗಸಭೆಯ ಪೂರ್ವಭಾವಿ ಸಿದ್ಧತೆಗಳನ್ನು ವಿವರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪಾದಚಾರಿ ಮಾರ್ಗಕ್ಕೆ ತ್ರಿವರ್ಣ ಬಳಿದಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ. ಜನ ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಥಳೀಯಾಡಳಿತ ಮತ್ತು ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನ ಎಂದು ಪಾದಚಾರಿಯೊಬ್ಬ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಅದೇ ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

ಪಾದಚಾರಿ ಮಾರ್ಗಕ್ಕೆ ತಿರಂಗವನ್ನೇನೋ ಬಳಿಯಲಾಗಿದೆ. ಆದರೆ, ಅಲ್ಲೆಲ್ಲೂ ಅಶೋಕ ಚಕ್ರ ಇಲ್ಲ. ಹೀಗಾಗಿ ಇದು ಭಾರತೀಯ ಧ್ವಜವನ್ನು ಪ್ರತಿನಿಧಿಸುವುದಿಲ್ಲ. ಅಪಮಾನದ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಕೆಲ ಮಂದಿ ಹೇಳಿದ್ದಾರೆ.

ಇದೇ ವಿಡಿಯೊವನ್ನು ತೆಲಂಗಾಣದ ಟಿಆರ್‌ಎಸ್‌ ಮುಖಂಡರೂ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಂಡಿದ್ದು, ಇದು ತಿರಂಗಕ್ಕೆ, ದೇಶಕ್ಕೆ ಮಾಡಿದ ಅಪಮಾನವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವಿಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿತ್ತು, ಯಾರು ಚಿತ್ರೀಕರಿಸಿದ್ದರು, ಇಂದೋರ್‌ನ ಯಾವ ಪ್ರದೇಶದ್ದು ಎಂಬುದು ಖಾತ್ರಿಯಾಗಿಲ್ಲ.

ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ.ಮೊಹಮ್ಮದ್ ಇರ್ಫಾನ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿಲದ್ದಾರೆ. ರಿಪಬ್ಲಿಕ್ ಆಫ್ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.