ಜನರು ಹಸುವಿನ ಮೂತ್ರ (ಗಂಜಲ) ಮತ್ತು ಸಗಣಿಯ ಪ್ರಯೋಜನಗಳ ಬಗ್ಗೆ ಮಾತನಾಡುವ ಸಾಕಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಆದರೆ, ಇಲ್ಲೊಬ್ಬ ವೈದ್ಯ, ಹಸುವಿನ ಸಗಣಿಯು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ದೀಕರಿಸುತ್ತದೆ ಎಂದು ಹೇಳಿ ಅದನ್ನು (ಸಗಣಿ) ತಿನ್ನುವ ವಿಡಿಯೊ ಇದೀಗ ವೈರಲ್ ಆಗಿದೆ.
ವಿಡಿಯೊದಲ್ಲಿರುವ ವೈದ್ಯರನ್ನುಹರಿಯಾಣದ ಕರ್ನಲ್‌ನವರಾದ ಡಾ. ಮನೋಜ್ ಮಿತ್ತಲ್ ಎನ್ನಲಾಗಿದೆ. ಅವರು, ಕೊಟ್ಟಿಗೆಯಲ್ಲಿ ನಿಂತು ಸಗಣಿ ಮತ್ತು ಗಂಜಲದ ಪ್ರಯೋಜನದ ಬಗ್ಗೆ ಮಾತನಾಡುತ್ತಾ, ಸಗಣಿಯನ್ನು ತಿನ್ನುವ ದೃಶ್ಯ ವಿಡಿಯೊದಲ್ಲಿದೆ.
‘ನನ್ನ ತಾಯಿ ಸಗಣಿ ತಿನ್ನುವ ಮೂಲಕ ಉಪವಾಸ ಅಂತ್ಯಗೊಳಿಸುತ್ತಿದ್ದರು' ಎಂದು ಹೇಳಿಕೊಂಡಿರುವ ವೈದ್ಯ,ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಸಗಣಿ ತಿನ್ನಬೇಕು. ಅದನ್ನು ತಿಂದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯವೇ ಇರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.ಹಾಗೆಯೇ, ಹಸುವಿನ ಗಂಜಲದಲ್ಲಿ ಚಿನ್ನದ ಅಂಶವಿರುತ್ತದೆ ಎಂದೂ ತಿಳಿಸಿದ್ದಾರೆ.
ವೈರಲ್ ಆಗಿರುವ ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ‘ಭಾರತೀಯ ವೈದ್ಯಕೀಯ ಪರಿಷತ್ತು ಇದನ್ನು ಪರಿಗಣಿಸಬೇಕು ಮತ್ತು ಆತನ ವೈದ್ಯಕೀಯ ವೃತ್ತಿಯ ಪರವಾನಗಿ ರದ್ದುಪಡಿಸಬೇಕು. ಒಬ್ಬ ಶಿಶುವೈದ್ಯನಾಗಿ, ಸಣ್ಣ ಮಕ್ಕಳಿಗೆ ಸಗಣಿ ತಿನ್ನುವಂತೆ ಸಲಹೆ ನೀಡಬಾರದು‘ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಅಯ್ಯೋ ದೇವರೇ. ಈ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ‘ ಎಂದು ಅಚ್ಚರಿವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು,ದೇಶದ ಆರ್ಥಿಕತೆಯನ್ನು ಬಲಪಡಿಸಲು ಹಸು, ಅದರ ಸಗಣಿ ಹಾಗೂ ಮೂತ್ರವು ಸಹಕಾರಿ ಎಂದು ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.