ಆನಂದ್(ಗುಜರಾತ್): ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಶ್ವಾನಗಳು ವೃದ್ಧಾಪ್ಯ ಅಥವಾ ಇತರ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅನರ್ಹ ಗೊಂಡಾಗ, ಅವುಗಳ ಪಾಲನೆ, ಪೋಷಣೆಗಾಗಿ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ‘ನಿವೃತ್ತ ಪೊಲೀಸ್ ಶ್ವಾನಗಳ ವಿಶ್ರಾಂತಿ ಧಾಮ’ವನ್ನು ಆರಂಭಿಸಲಾಗಿದೆ.
ಇಲ್ಲಿ ಈ ಶ್ವಾನಗಳಿಗೆ ವಸತಿ, ಆಹಾರ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯಲಿವೆ ಎಂದು ಡಿಎಸ್‌ಪಿ ಜೆ.ಜೆ.ಚೌಧರಿ ಅವರು ಮಾಹಿತಿ ನೀಡಿದರು.
‘ಪೊಲಿಸ್ ಇಲಾಖೆಯ ನಿವೃತ್ತ ಶ್ವಾನಗಳಿಗಾಗಿಯೇ ಸ್ಥಾಪಿಸಲಾಗಿರುವ ಈ ವಿಶ್ರಾಂತಿ ಧಾಮವು ದೇಶ ದಲ್ಲಿಯೇ ಮೊದಲನೇಯದು. ಪ್ರಸ್ತುತ ಇಲ್ಲಿ 16 ನಿವೃತ್ತ ಶ್ವಾನಗಳು, ಕರ್ತವ್ಯದಲ್ಲಿರುವ ಎರಡು ಮತ್ತು ತರಬೇತಿ ಪಡೆಯುತ್ತಿರುವ ಎರಡು ಶ್ವಾನಗಳು ಸೇರಿ ಒಟ್ಟು 20 ಶ್ವಾನಗಳಿವೆ’ ಎಂದು ಅವರು ವಿವರಿಸಿದರು.
ಪೊಲೀಸ್ ಶ್ವಾನದಳದ ನಿವೃತ್ತ ಸದಸ್ಯರಿಗಾಗಿ ಇಲ್ಲಿ 23 ಕೊಠಡಿಗಳಿವೆ. ಅಲ್ಲದೆ ಕರ್ತವ್ಯದಲ್ಲಿರುವ ಶ್ವಾನಗಳಿಗೆ ಮೂರು ಕೊಠಡಿಗಳಿವೆ. ಆಹಾರ, ವೈದ್ಯಕೀಯ ಆರೈಕೆ ಒದಗಿಸುವ ಜತೆಗೆ ಸ್ವಚ್ಛತೆಗೆ ಒತ್ತು ನೀಡಲಾಗಿದೆ ಎಂದು ಈ ವಿಶೇಷ ಮನೆಯ ಉಸ್ತುವಾರಿಯೂ ಆಗಿರುವ ಚೌಧರಿ ತಿಳಿಸಿದರು.
ಇಲ್ಲಿ ಪ್ರತಿ ಶ್ವಾನಕ್ಕೆ ನಿತ್ಯ 700 ಗ್ರಾಂ ಹಾಲು, 170 ಗ್ರಾಂ ರೊಟ್ಟಿ, ಬೆಳಿಗ್ಗೆ ಒಂದು ಮೊಟ್ಟೆ, ಸಂಜೆ 280 ಗ್ರಾಂ ಕುರಿ ಮಾಂಸ, ತರಕಾರಿ ಮತ್ತು ಅನ್ನ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಇಲ್ಲಿರುವ ಎಲ್ಲ ಶ್ವಾನಗಳನ್ನು 15 ದಿನಕ್ಕೊಮ್ಮೆ ಪಶು ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸುತ್ತಾರೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆಯೂ ಇಲ್ಲಿದೆ ಎಂದು ಅವರು ಹೇಳಿದರು.
ಶ್ವಾನಗಳನ್ನು ನಿತ್ಯ ಬೆಳಿಗ್ಗೆ, ಸಂಜೆ ಆಡಲು ಬಿಡ ಲಾಗುತ್ತದೆ. ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಈ ಶ್ವಾನಗಳ ಭೇಟಿ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಆಗ ಜನರು ಇವುಗಳೊಂದಿಗೆ ಕಾಲ ಕಳೆಯಬಹುದು ಮತ್ತು ಅವುಗಳಿಗೆ ಆಹಾರ ನೀಡಬಹುದಾಗಿದೆ ಎಂದು ಚೌಧರಿ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಶ್ವಾನಗಳು 8ರಿಂದ 10 ವರ್ಷಗಳ ಬಳಿಕ ನಿವೃತ್ತಿ ಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.