ADVERTISEMENT

ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕಾಯಕಲ್ಪ: ಎಚ್‌ಡಿಕೆ ಅಭಯ 

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:42 IST
Last Updated 11 ಜುಲೈ 2024, 12:42 IST
<div class="paragraphs"><p>ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ&nbsp;ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ&nbsp;ಭೇಟಿ ನೀಡಿ ಪರಿಶೀಲನೆ ನಡೆಸಿದರು.</p></div>

ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

   

ನವದೆಹಲಿ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಖಾನೆಯ ಕಾರ್ಯ ಚಟುವಟಿಕೆ, ವಿಸ್ತಾರ, ವಿಭಾಗವಾರು ಮಾಹಿತಿಯನ್ನು ಕಂಪನಿಯ ಅಧ್ಯಕ್ಷ ಅತುಲ್ ಭಟ್ ಅವರು ಸಚಿವರಿಗೆ ನೀಡಿದರು. ಎಲ್ಲ ವಿಭಾಗಗಳ ಕ್ಷಮತೆ, ಸಿಬ್ಬಂದಿ ವಿವರ, ನಿರ್ವಹಣೆ ಹಾಗೂ ಫಲಿತಾಂಶದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

ADVERTISEMENT

ಬಳಿಕ ಕಬ್ಬಿಣ ಅದಿರು ಸಂಸ್ಕರಣೆ ಹಾಗೂ ಉಕ್ಕು ತಯಾರಿಕಾ ವಿಭಾಗಗಳಿಗೆ ಭೇಟಿ ನೀಡಿದ ಅವರು ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಎಲ್ಲ ವಿಭಾಗದಲ್ಲಿಯೂ ಕಾರ್ಮಿಕರ ಜತೆ ಸಂವಾದ ನಡೆಸಿದ ಕೇಂದ್ರ ಸಚಿವರು, ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು.

ಆ ನಂತರ ಕೇಂದ್ರ ಸಚಿವರು ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಕಾರ್ಖಾನೆಯ ಆಗುಹೋಗು, ವಹಿವಾಟು, ಲಾಭ ನಷ್ಟ, ಉತ್ಪಾದನೆ, ಕಾರ್ಯನಿರ್ವಹಣೆಯ ಕ್ಷಮತೆ, ಅದಿರು ಪೂರೈಕೆ, ಕಾರ್ಮಿಕರ ಕುರಿತಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಈ ಸಭೆಯಲ್ಲಿ ಭಾಗಿಯಾದ ಜನಪ್ರತಿನಿಧಿಗಳು, ‘ಈ ಕಂಪನಿಯನ್ನು ಉಳಿಸಲೇಬೇಕು. ಕೇಂದ್ರ ಸರ್ಕಾರವೇ ನಿರ್ವಹಣಾ ಬಂಡವಾಳ ನೀಡಲಿ ಅಥವಾ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ವಿಲೀನ ಮಾಡಲಿ’ ಎಂದು ಸಚಿವರ ಮುಂದೆ ವಾದ ಮಂಡಿಸಿದರು.

ಈ ಸಭೆಯ ನಂತರ ಕೇಂದ್ರ ಸಚಿವರು ಕಂಪನಿಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿದರು. ಯಾವುದೇ ಕಾರಣಕ್ಕೂ ಕಂಪನಿಯನ್ನು ಖಾಸಗಿಯವರಿಗೆ ಕೊಡಬಾರದು, ಸರ್ಕಾರವೇ ನಡೆಸಬೇಕು ಎಂದು ಕಾರ್ಮಿಕ ಮುಖಂಡರು ಒತ್ತಾಯ ಮಾಡಿದರು.

ಕಾರ್ಖಾನೆಗೆ ಅತ್ಯಗತ್ಯ ಇರುವ ಕಬ್ಬಿಣ ಅದಿರು ಗಣಿಗಳನ್ನು ಹಂಚಿಕೆ ಮಾಡಿ ಎಂದು ಕಾರ್ಮಿಕ ಮುಖಂಡರು ಸಚಿವರನ್ನು ಕೋರಿದರು.

‘ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಂಪನಿ ಬಗ್ಗೆ ಸರಣಿ ಸಭೆಗಳನ್ನು ನಡೆಸಿದ್ದೇನೆ. ಉನ್ನತ ಅಧಿಕಾರಿಗಳು, ಸಾಲ ನೀಡಿರುವ ಬ್ಯಾಂಕರುಗಳ ಜತೆ ಮಾತುಕತೆ ನಡೆಸಿದ್ದೇನೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳ ಒಳಗಾಗಿ ಕಾರ್ಖಾನೆಗೆ ಭೇಟಿ ನೀಡಿದ್ದೇನೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯವೈಖರಿ’ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನಿಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಆತ್ಮನಿರ್ಭರ್ ಭಾರತ್, ಮೆಕ್ ಇನ್ ಇಂಡಿಯಾ ಮೂಲಕ ಈ ಕಂಪನಿಯನ್ನು ಪುನಶ್ಚೇತನ ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು. ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ. ಆ ಗುರಿ ಮುಟ್ಟುವ ಹಾದಿಯಲ್ಲಿ ಈ ಕಾರ್ಖಾನೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಸ್ವಲ್ಪ ಕಾಲಾವಕಾಶ ಕೊಡಿ. ಕಳೆದ 20 ದಿನಗಳಲ್ಲಿ 16 ದಿನ ಈ ಕಾರ್ಖಾನೆಗೆ ಸಮಯ ಕೊಟ್ಟು ಕೆಲಸ ಮಾಡಿದ್ದೇನೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಈ ಕಾರ್ಖಾನೆಗೆ ಕಾಯಕಲ್ಪ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.