ಭುವನೇಶ್ವರ: ನವದೆಹಲಿಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬುಧವಾರ ಮಧ್ಯಾಹ್ನ ಆಲಿಕಲ್ಲು ಬಡಿದಿದೆ. ಟೇಕ್‌ಆಫ್ ಆದ 10 ನಿಮಿಷಗಳಲ್ಲೇ ಅದೇ ನಿಲ್ದಾಣದಲ್ಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಭುವನೇಶ್ವರದಿಂದ 169 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತ ವಿಸ್ತಾರಾ ಸಂಸ್ಥೆಗೆ ಸೇರಿದ ವಿಮಾನ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಮಧ್ಯಾಹ್ನ ನವದೆಹಲಿಯತ್ತ ಹೊರಟಿತ್ತು. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನಕ್ಕೆ ಆಲಿಕಲ್ಲು ಬಡಿಯಿತು. ಇದರಿಂದ ವಿಮಾನಕ್ಕೆ ಹಾನಿಯಾದ ಪರಿಣಾಮ, ಟೇಕ್‌ಆಫ್ ಆದ 10 ನಿಮಿಷಗಳಲ್ಲಿ ಅದೇ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನದ ವಿಂಡ್‌ಶೀಲ್ಡ್‌ಗೆ ಹಾನಿಯಾಗಿ, ಬಿರುಕು ಮೂಡಿದೆ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ನಿಲ್ದಾಣದ ನಿರ್ದೇಶಕ ಪ್ರಸನ್ನ ಪ್ರಧಾನ್ ತಿಳಿಸಿದ್ದಾರೆ.
ಒಡಿಶಾದ ಕೆಲ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು ಸಹಿತ ವ್ಯಾಪಕ ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.