ADVERTISEMENT

ಮಾನವೀಯತೆಯ ಕುರುಹಾಗಿ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪನೆ: ಅಗ್ನಿಹೋತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 14:04 IST
Last Updated 25 ಮಾರ್ಚ್ 2022, 14:04 IST
ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಮ್ಯೂಸಿಯಂ ನಿರ್ಮಾಣಕ್ಕೆ ಭೂಮಿ ನೀಡುವಂತೆ ವಿವೇಕ್‌ ಅಗ್ನಿಹೋತ್ರಿ.ವಿನಂತಿಸಿದ
ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಮ್ಯೂಸಿಯಂ ನಿರ್ಮಾಣಕ್ಕೆ ಭೂಮಿ ನೀಡುವಂತೆ ವಿವೇಕ್‌ ಅಗ್ನಿಹೋತ್ರಿ.ವಿನಂತಿಸಿದ    

ಭೋಪಾಲ್‌: 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಮಧ್ಯಪ್ರದೇಶದಲ್ಲಿ ‘ನರಮೇಧ ವಸ್ತುಸಂಗ್ರಹಾಲಯ’ ಅನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವೇಕ್‌ ಅಗ್ನಿಹೋತ್ರಿ, ''ಭಾರತ ಮಾನವೀಯತೆಯ ಪ್ರತೀಕ. ಮಧ್ಯಪ್ರದೇಶ ಅತ್ಯಂತ ಶಾಂತಿಪೂರ್ಣ ಭೂಮಿಯಾಗಿದೆ. ಇಲ್ಲಿ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಅವಶ್ಯಕವಾದ ಭೂಮಿಯನ್ನು ನೀಡಬೇಕು'' ಎಂದು ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಚೌಹಾಣ್‌, ಮ್ಯೂಸಿಯಂ ಸ್ಥಾಪನೆಗೆ ಭೂಮಿ ಮತ್ತು ಅಗತ್ಯ ಸಹಕಾರವನ್ನು ನೀಡುವುದಾಗಿ ಅಭಯ ನೀಡಿದರು.

ADVERTISEMENT

'ಐ ಆ್ಯಮ್‌ ಬುದ್ಧ ಫೌಂಡೇಷನ್‌' ಮತ್ತು 'ಗ್ಲೋಬಲ್‌ ಕೆಪಿ ಡಯಾಸ್‌ಪೊರ' ಸಂಸ್ಥೆಗಳ ಸಹಯೋಗದಲ್ಲಿ ಮ್ಯೂಸಿಯಂ ಸ್ಥಾಪಿಸುವುದಾಗಿ ವಿವೇಕ್‌ ಅಗ್ನಿಹೋತ್ರಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

''ಕಾಶ್ಮೀರದ ಹಿಂದುಗಳು ಮತ್ತು ಹಿಂಸೆಗೆ ಒಳಗಾದ ಮಂದಿಯ ಪರವಾಗಿ ಸಿಎಂ ಚೌಹಾಣ್‌ ಅವರಿಗೆ ಧನ್ಯವಾದಗಳು. ಈ ಮ್ಯೂಸಿಯಂ ಮೂಲಕ ಭಾರತದ ಮೌಲ್ಯಗಳಾದ ಮಾನವೀಯತೆ ಮತ್ತು ವಿಶ್ವ ಕಲ್ಯಾಣವನ್ನು ಪ್ರತಿಬಿಂಬಿಸುವಂತೆ ಮಾಡಲು ಹೊರಟಿದ್ದೇವೆ. ಈ ಮ್ಯೂಸಿಯಂ ಉಗ್ರರು ಹೇಗೆ ಮಾನವೀಯತೆಯನ್ನು ನಾಶ ಮಾಡಿದರು ಎಂಬುದನ್ನು ಸಾರುತ್ತದೆ'' ಎಂದು ವಿವೇಕ್‌ ಅಗ್ನಿಹೋತ್ರಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

'ನರಮೇಧ ವಸ್ತುಸಂಗ್ರಹಾಲಯ'ಕ್ಕೆ ಭೂಮಿ

‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾವು ಸ್ಥಳಾಂತರಗೊಂಡಿರುವ ಕಾಶ್ಮೀರಿ ಪಂಡಿತರ ನೋವು ಮತ್ತು ಸಂಕಷ್ಟಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ನಮ್ಮ ಸರ್ಕಾರ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪಿಸಲು ಭೂಮಿ ಒದಗಿಸಲಿದೆ’ ಎಂದು ಹೇಳಿದ್ದಾರೆ.

ಇಲ್ಲಿನಸ್ಮಾರ್ಟ್‌ ಸಿಟಿ ಉದ್ಯಾನದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಶುಕ್ರವಾರ ಸಸಿ ನೆಟ್ಟರು. ಈ ವೇಳೆ ಭೋಪಾಲ್‌ನಲ್ಲಿ ನೆಲೆಸಿರುವ ಕೆಲ ಕಾಶ್ಮೀರಿ ಪಂಡಿತರೂ ಉಪಸ್ಥಿತರಿದ್ದರು.

ಈ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಚೌಹಾಣ್‌,‘ಈ ಸಿನಿಮಾದ ಮೂಲಕ ಕಾಶ್ಮೀರಿ ಪಂಡಿತರು ಅನುಭವಿಸಿದ ನೋವು, ಸಂಕಷ್ಟಗಳ ಬಗ್ಗೆ ಜಗತ್ತಿಗೆ ತಿಳಿಯಿತು. ಮಧ್ಯಪ್ರದೇಶದಲ್ಲಿ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪಿಸುವಂತೆ ವಿವೇಕ್‌ ಅಗ್ನಿಹೋತ್ರಿ ಅವರು ಸಲಹೆ ನೀಡಿ‌ದ್ದಾರೆ. ಇದಕ್ಕಾಗಿ ನಮ್ಮ ಸರ್ಕಾರವು ಅಗತ್ಯವಿರುವ ನೆರವು ಮತ್ತು ಭೂಮಿಯನ್ನು ಒದಗಿಸಲಿದೆ’ ಎಂದು ತಿಳಿಸಿದ್ದಾರೆ.‘ಕಾಶ್ಮೀರಿ ಪಂಡಿತರು ಎದುರಿಸಿದ ನೋವಿನ ಬಗ್ಗೆ ಜಗತ್ತಿಗೆ ಅರಿವಿರಲಿಲ್ಲ. ಇದನ್ನು ಎಲ್ಲರಿಗೆ ತಿಳಿಯುವಂತೆ ಮಾಡಿದ ನಿಮ್ಮ ಧೈರ್ಯಕ್ಕೆ ನನ್ನ ಸೆಲ್ಯೂಟ್‌’ ಎಂದು ಅವರು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.