ನವದೆಹಲಿ: 2018ರಲ್ಲಿ ನ್ಯಾಯಮೂರ್ತಿಯೊಬ್ಬರನ್ನು ನಿಂದಿಸಿದ ಪ್ರಕರಣದಲ್ಲಿ, ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ದೆಹಲಿ ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಭೀಮಾ ಕೊರೆಂಗಾವ್ ಹಿಂಸಾಚಾರ ಪ್ರಕರಣದಲ್ಲಿ, ಸಾಮಾಜಿಕ ಹೋರಾಟಗಾರ ಗೌತಮ್ ನವಲಖ ಅವರಿಗೆ ಜಾಮೀನು ನೀಡಿದ ಅಂದಿನ ನ್ಯಾಯಮೂರ್ತಿಗಳಾದ ಎಸ್ . ಮುರಳೀಧರ್ ಅವರ ನಿರ್ಧಾರ ಪಕ್ಷಪಾತದಿಂದ ಕೂಡಿದೆ ಎಂದು ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು.
ಇದಾದ ಬಳಿಕ ವಿವೇಕ್ ಅಗ್ನಿಹೋತ್ರಿ, ಬರಹಗಾರ ಆನಂದ್ ರಂಗನಾಥನ್ ಹಾಗೂ ‘ಸ್ವರಾಜ್‘ ನ್ಯೂಸ್ ಪೋರ್ಟಲ್ ವಿರುದ್ಧ, ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರ್ಟ್ ದಾಖಲಿಸಿಕೊಂಡಿತ್ತು.
ಆರೆಸ್ಸೆಸ್ ನಾಯಕ ಗುರುಮೂರ್ತಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು, ಬಳಿಕ ಅವರು ಕ್ಷಮೆಯಾಚಿಸಿದ್ದರಿಂದ ಅವರ ಮೇಲಿದ್ದ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿತ್ತು.
ಪ್ರಕರಣ ವಿಚಾರಣೆಗೆ ಅಗ್ನಿಹೋತ್ರಿ ಅವರು ಖುದ್ದಾಗಿ ಹಾಜರಿರಬೇಕು ಎಂದು ಕೋರ್ಟ್ ಸೂಚಿಸಿತ್ತು.
ಇಂದು ತಮ್ಮ ವಕೀಲರ ಮೂಲಕ ಅಗ್ನಿಹೋತ್ರಿ ಅವರು, ತಾವು ಬೇಷರತ್ ಕ್ಷಮೆಯಾಚಿಸುವುದಾಗಿ ದೆಹಲಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಲ್ಲದೇ ತಾನು ಮಾಡಿದ ಟ್ವೀಟ್ ಡಿಲೀಟ್ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.