ADVERTISEMENT

ವಿಶಾಖಪಟ್ಟಣ ಅನಿಲ ದುರಂತ |11 ಮಂದಿ ಸಾವು, ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2020, 13:16 IST
Last Updated 7 ಮೇ 2020, 13:16 IST
ವಿಶಾಖಪಟ್ಟಣ ಅನಿಲ ದುರಂತದಿಂದ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವಿಶಾಖಪಟ್ಟಣ ಅನಿಲ ದುರಂತದಿಂದ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.   
""
""
""

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಗುರುವಾರ ಬೆಳಗಿನಜಾವ ಸಂಭವಿಸಿರುವ ಅನಿಲ ಸೋರಿಕೆಯಿಂದಾಗಿ ಮಧ್ಯಾಹ್ನ 3:00 ವರೆಗಿನ ಮಾಹಿತಿ ಪ್ರಕಾರ 11 ಮಂದಿ ಸಾವಿಗೀಡಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಆರ್‌ಆರ್‌ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಅಸ್ವಸ್ಥಗೊಂಡಿರುವವರನ್ನು ಕಿಂಗ್‌ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ, ಅನಿಲ ದುರಂತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಅನಿಲ ಸೋರಿಕೆಯ ಪರಿಣಾಮ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರಿಗೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ; ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯುತ್ತಿರುವವರಿಗೆ ₹10 ಲಕ್ಷ ಹಾಗೂ ಎಲ್‌ಜಿ ಪಾಲಿಮರ್ಸ್‌ ಕಂಪನಿಯ ಸುತ್ತಮುತ್ತಲಿನ ಕುಟುಂಬಗಳಿಗೆ ₹10,000 ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಎಲ್‌ಜಿ ಪಾಲಿಮರ್ಸ್‌ ಕಂಪನಿಯನ್ನು ಸ್ಥಳಾಂತರಿಸಲಾಗುತ್ತದೆ ಹಾಗೂ ವರದಿಯನ್ನು ಆಧರಿಸಿ ಅನಿಲ ಸೋರಿಕೆಯ ಪರಿಣಾಮಕ್ಕೆ ಒಳಗಾಗಿರುವ ಸ್ಥಳೀಯರಿಗೆ ಕಂಪನಿಯಲ್ಲಿ ಉದ್ಯೋಗ ದೊರೆಯುತ್ತದೆ ಎಂದಿದ್ದಾರೆ.

ವಿಶಾಖಪಟ್ಟಣದ ಜನರು ನಿದ್ದೆಯಲ್ಲಿರುವಾಗ ಇಲ್ಲಿನ ಕಾರ್ಖಾನೆಯಲ್ಲಿ ಸಿಂಥೆಟಿಕ್ ರಬ್ಬರ್ ಮತ್ತು ರೆಸಿನ್ಸ್ ಮಾಡಲು ಬಳಸುವ ರಾಸಾಯನಿಕಸ್ಟೈರೀನ್‌ಸೋರಿಕೆಯಾಗಿದೆ. ಗೋಪಾಲಪಟನಂ ಗ್ರಾಮದಲ್ಲಿನ ಜನರು ಕಂಗಾಲಾಗಿಸಹಾಯಕ್ಕಾಗಿ ಅಂಗಲಾಚಿದ್ದಾರೆ.
ನಿದ್ದೆಯಲ್ಲಿಯೇ ಹಲವಾರು ಮಂದಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಜನರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಾಗ ಆಟೋ, ದ್ವಿಚಕ್ರವಾಹನಗಳಲ್ಲಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ವಿಶಾಖಪಟ್ಟಣದ ಇಂದಿನದೃಶ್ಯ 1984ರಲ್ಲಿ ನಡೆದ ಭೋಪಾಲ ಅನಿಲ ದುರಂತವನ್ನು ನೆನಪಿಸುತ್ತಿದೆ.ಭೋಪಾಲದಲ್ಲಿ ಯೂನಿಯನ್ ಕಾರ್ಬೈಡ್ ಘಟಕದಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ದುರಂತದಲ್ಲಿ 3,500 ಮಂದಿ ಸಾವಿಗೀಡಾಗಿದ್ದರು.

ಎಲ್‌ಜಿ ಪಾಲಿಮರ್ಸ್‌ನಿಂದ ಅನಿಲ ಸೋರಿಕೆ ಆಗಿರುವುದು

ಅನಿಲ ಸೋರಿಕೆಯನ್ನು ಶಮನಗೊಳಿಸುವ ಕಾರ್ಯಕ್ಕಾಗಿ ಡಾಮನ್‌ನಿಂದ 500 ಕೆ.ಜಿಯಷ್ಟು ಪ್ಯಾರಾ–ಟೆರ್ಶಿಯರಿ ಬ್ಯುಟೈಲ್‌ ಕ್ಯಾಟೆಕಾಲ್‌ ( Para-tertiary butyl catechol–PTBC) ರಾಸಾಯನಿಕವನ್ನು ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಗುಜರಾತ್‌ನ ಮುಖ್ಯಮಂತ್ರಿ ವಿಜಯ್‌ ರುಪಾನಿ ಅವರ ಕಾರ್ಯದರ್ಶಿ ಅಶ್ವನಿ ಕುಮಾರ್‌ ಹೇಳಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಗುಜರಾತ್‌ ಸರ್ಕಾರಕ್ಕೆ ಮನವಿ ಅನಿಲ ಸೋರಿಕೆ ಶಮನಗೊಳಿಸಲು ರಾಸಾಯನಿಕ ಕಳುಹಿಸುವಂತೆ ಮನವಿ ಮಾಡಿತ್ತು.

ಅನಿಲ ಸೋರಿಕೆಯಿಂದಾಗಿ ಸುತ್ತಲ ಪ್ರದೇಶದ ಜನರಲ್ಲಿ ಉಸಿರಾಟ ತೊಂದರೆ, ಕಣ್ಣು ಉರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರು, ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಕಾರ್ಖಾನೆಯಸುತ್ತಮುತ್ತ ವಾಸಿಸುವ ಜನರು ಒದ್ದೆ ಬಟ್ಟೆಯಿಂದ ಬಾಯಿ ಹಾಗೂ ಮೂಗು ಮುಚ್ಚಿಕೊಂಡು ಮನೆಯೊಳಗೆ ಇರುವಂತೆ ವಿಶಾಖಪಟ್ಟಣ ಮಹಾನಗರಪಾಲಿಕೆ ಜನರಿಗೆ ಎಚ್ಚರಿಕೆ ನೀಡಿದೆ. ಬಾಳೆ ಹಣ್ಣು, ನೀರು ಹಾಗೂ ಬೆಲ್ಲ ಸೇವಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

‘ವಿಷನಿಲದ ಸೋರಿಕೆಯಾಗುತ್ತಿದ್ದಂತೆ ಅದು ಹರಡುವುದನ್ನು ತುರ್ತಾಗಿ ತಡೆಯಲಾಯಿತು. ಆದರೆ, ಅಲ್ಪ ಪ್ರಮಾಣದ ಅನಿಲ ಸುತ್ತಲ ಪ್ರದೇಶವನ್ನು ಆವರಿಸಿತು. ಹೀಗಾಗಿ ಜನರಿಗೆ ಸಮಸ್ಯೆ ಎದುರಾಗಿದೆ.ಈ ದುರಂತಕ್ಕೆ ಕಂಪನಿಯೇ ಹೊಣೆ. ಘಟನೆ ಬಗ್ಗೆ ಕಂಪನಿಯು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅಲ್ಲಿ ಲೋಪದೋಷಗಳು ಸಂಭವಿಸಿದ್ದರೆ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವ ಎಂಜಿ ರೆಡ್ಡಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳೂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರಿಗೆ ಕಂಬನಿ ಮಿಡಿದಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವವರು ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಟ್ವೀಟ್‌ ಮೂಲಕ ವಿಶಾಖಪಟ್ಟದ ಜನರಿಗಾಗಿ ಪ್ರಾರ್ಥಿಸಿದ್ದಾರೆ.

ಅನಿಲ ಸೋರಿಕೆ ಸಂಭವಿಸಿದ ಪ್ರದೇಶದಲ್ಲಿ ಎನ್‌ಡಿಆರ್‌ಎಫ್‌ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಎನ್‌ಡಿಆರ್‌ಎಫ್‌ನ ಡಿಜಿ ಎಸ್‌‌.ಎನ್‌.ಪ್ರಧಾನ್‌ ತಿಳಿಸಿದ್ದಾರೆ.ಸ್ಥಳೀಯರಲ್ಲಿ ಗಂಟಲು, ಚರ್ಮ ಉರಿ ಕಾಣಿಸಿಕೊಂಡಿದೆ. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ. ಪೊಲೀಸರು, ಜಿಲ್ಲಾಡಳಿತ ನೆರವಿಗೆ ಧಾವಿಸಿದೆ. ಈವರೆಗೆ1000–1500 ಮಂದಿಯನ್ನು ಸ್ಥಳಾಂತರ ಮಾಡಲಿದೆ. ಸುಮಾರು 800 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.