ADVERTISEMENT

ಭೋಪಾಲ್ ಅನಿಲ ದುರಂತವನ್ನು ನೆನಪಿಸಿದ ವಿಶಾಖಪಟ್ಟಣ!

ಪಿಟಿಐ
Published 7 ಮೇ 2020, 10:22 IST
Last Updated 7 ಮೇ 2020, 10:22 IST
ಪ್ರಜ್ಞೆ ತಪ್ಪಿರುವ ವ್ಯಕ್ತಿಯನ್ನು ಕರೆದೊಯ್ಯುತ್ತಿರುವುದು (ಪಿಟಿಐ)
ಪ್ರಜ್ಞೆ ತಪ್ಪಿರುವ ವ್ಯಕ್ತಿಯನ್ನು ಕರೆದೊಯ್ಯುತ್ತಿರುವುದು (ಪಿಟಿಐ)   

ವಿಶಾಖಪಟ್ಟಣ: ಪ್ರಜ್ಞೆ ತಪ್ಪಿದ ಮಕ್ಕಳನ್ನು ಎತ್ತಿಕೊಂಡು ಓಡುತ್ತಿರುವ ಹೆತ್ತವರು, ರಸ್ತೆಯಲ್ಲಿ ಬಿದ್ದಿರುವ ಜನರು, ಜನರನ್ನು ರಕ್ಷಿಸಲು ಧಾವಿಸುತ್ತಿರುವ ಆರೋಗ್ಯ ಕಾರ್ಯಕರ್ತರು.. ಗುರುವಾರ ವಿಶಾಖಪಟ್ಟಣದಲ್ಲಿ ಅನಿಲ ದುರಂತ ಸಂಭವಿಸಿದಾಗ ಕಂಡಚಿತ್ರಣವಿದು.

ಇಲ್ಲಿನ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿದ್ದು 8 ಮಂದಿ ಸಾವಿಗೀಡಾಗಿದ್ದಾರೆ. 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ವಿಶಾಖಪಟ್ಟಣದ ಈ ದೃಶ್ಯ 1984ರಲ್ಲಿ ನಡೆದ ಭೋಪಾಲ ಅನಿಲ ದುರಂತವನ್ನು ನೆನಪಿಸಿತ್ತು.ಭೋಪಾಲದಲ್ಲಿ ಯೂನಿಯನ್ ಕಾರ್ಬೈಡ್ ಘಟಕದಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ದುರಂತದಲ್ಲಿ 3,500 ಮಂದಿ ಸಾವಿಗೀಡಾಗಿದ್ದರು.

ವಿಶಾಖಪಟ್ಟಣದ ಜನರು ನಿದ್ದೆಯಲ್ಲಿರುವಾಗ ಇಲ್ಲಿನ ಕಾರ್ಖಾನೆಯಲ್ಲಿ ಸಿಂಥೆಟಿಕ್ ರಬ್ಬರ್ ಮತ್ತು ರೆಸಿನ್ಸ್ ಮಾಡಲು ಬಳಸುವ ರಾಸಾಯನಿ ಸ್ಟೈರೆನ್ ಸೋರಿಕೆಯಾಗಿದೆ. ಗೋಪಾಲಪಟನಂ ಗ್ರಾಮದಲ್ಲಿನ ಜನರು ಕಂಗಾಲಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ನಿದ್ದೆಯಲ್ಲಿಯೇ ಹಲವಾರು ಮಂದಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಜನರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಾಗ ಆಟೋ, ದ್ವಿಚಕ್ರವಾಹನಗಳಲ್ಲಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಅನಿಲ ಸೋರಿಕೆ ವಿಷಯ ತಿಳಿದ ಕೂಡಲೇ 20 ಆ್ಯಂಬುಲೆನ್ಸ್‌ಗಳನ್ನು ಕಳಿಸಿಕೊಡಲಾಗಿದೆ ಎಂದು ವಿಶಾಖಪಟ್ಟಣ ಜಿಲ್ಲಾಧಿಕಾರಿ ವಿನಯ್ ಚಾಂದ್ ಹೇಳಿದ್ದಾರೆ.

ಎಥಿನೈಲ್‌ಬೆನ್ಜೀನ್, ವಿನೈಲ್‌ಬೆನ್ಜೀನ್ ಎಂದು ಕರೆಯಲ್ಪಡುವ ಸ್ಟೈರಿನ್ ನರವ್ಯೂಹವನ್ನು ಬಾಧಿಸುತ್ತಿದ್ದು ತಲೆನೋವು, ಸುಸ್ತು, ಬಲಹೀನತೆ ಮತ್ತು ಖಿನ್ನತೆಯನ್ನಂಟು ಮಾಡುತ್ತದೆ.ಪಾಲಿಸ್ಟೈರಿನ್ ಪ್ಲಾಸ್ಟಿಕ್ ಮತ್ತು ರೆಸಿನ್ಸ್ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ.

ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಲ್ಲಿ 1961ರಲ್ಲಿ ಸ್ಥಾಪನೆಯಾಗಿದ್ದ ಈಗಿನ ಎಲ್‌ಜಿ ಪಾಲಿಮರ್ಸ್ ಪಾಲಿಸ್ಟೈರಿನ್ ಮತ್ತು ಅದೇ ರೀತಿಯಪಾಲಿಮರ್‌ಗಳನ್ನು ವಿಶಾಖಪಟ್ಟಣದಲ್ಲಿ ಉತ್ಪಾದಿಸುತ್ತದೆ. ಕಂಪನಿಯ ವೆಬ್‌ಸೈಟ್ ಮಾಹಿತಿ ಪ್ರಕಾರ 1978ರಲ್ಲಿ ಇದು ಯುಬಿ ಗ್ರೂಪ್‌ನ ಮೆಕ್‌ಡವೆಲ್ ಆ್ಯಂಡ್ ಕಂಪನಿ ಜತೆ ವಿಲೀನವಾಗಿತ್ತು.

ದಕ್ಷಿಣ ಕೊರಿಯಾದ ಎಲ್‌ಜಿ ಕೆಮ್ ಹಿಂದೂಸ್ತಾನ್ ಪಾಲಿಮರ್ಸ್‌ ಕಂಪನಿಯನ್ನು ಖರೀದಿಸಿ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈ.ಲಿ ಎಂದು 1997 ಜುಲೈನಲ್ಲಿ ಹೆಸರು ಬದಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.