ನವದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸೋಲಿಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ದೂರುವಂತೆ ಕಾಂಗ್ರೆಸ್ ವರಿಷ್ಠರು ಒತ್ತಾಯ ಮಾಡುತ್ತಿರುವ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
‘ಚುನಾವಣೆಗಳಲ್ಲಿ ಆಗಿರುವ ಹಿನ್ನಡೆ ಕುರಿತು ಹೊಣೆಗಾರಿಕೆ ನಿಗದಿ ಮಾಡಬೇಕು. ಎಲ್ಲಿ ನಮ್ಮಿಂದ ತಪ್ಪಾಗಿದೆ ಎಂಬ ಬಗ್ಗೆ ಪ್ರಾಮಾಣಿಕ ಆತ್ಮಾವಲೋಕನ ನಡೆಸಬೇಕು’ ಎಂಬುದಾಗಿ ಪಕ್ಷದ ಯುವ ನಾಯಕರು ವರಿಷ್ಠರನ್ನು ಆಗ್ರಹಿಸಿದ್ದಾರೆ.
ಪಕ್ಷದ ವಕ್ತಾರ ಮೋಹನ್ ಕುಮಾರಮಂಗಲಂ ಹಾಗೂ ವಾರ್ ರೂಮ್‌ನ ಮಾಜಿ ಉಪಾಧ್ಯಕ್ಷ ವರುಣ್ ಸಂತೋಷ್ ಅವರು ಇವಿಎಂಗಳ ಕುರಿತ ಪಕ್ಷದ ನಿಲುವನ್ನು ಭಾನುವಾರ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ.
‘ಇವಿಎಂಗಳನ್ನು ದೂರುವುದನ್ನು ನಿಲ್ಲಿಸಿ’ ಎಂಬುದಾಗಿ ತಮಿಳುನಾಡು ಸಂಸದ ಕಾರ್ತಿ ಚಿದಂಬರಂ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ತಾವು ಮಾಡಿದ್ದ ಪೋಸ್ಟ್ ಅನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ.
‘ಸತತ ಸೋಲು ಕಂಡಿರುವ ದಿಗ್ವಿಜಯ ಸಿಂಗ್, ಇವಿಎಂ ವಿಷಯ ಪ್ರಸ್ತಾಪಿಸುತ್ತಾರೆ’ ಎಂದು ಹಿರಿಯ ಸಂಸದರೊಬ್ಬರು ಟೀಕಿಸಿದ್ಧಾರೆ.
‘ನೇರ ಲಾಭ ವರ್ಗಾವಣೆಯು (ಡಿಬಿಟಿ) ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ತಂತ್ರಗಾರಿಕೆಯಲ್ಲಿ ಯಾವ ಬದಲಾವಣೆಗಳಾಗಬೇಕು ಎಂಬ ಚರ್ಚೆ ಬದಲು, ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಅವರು ಇವಿಎಂ ವಿಷಯ ಪ್ರಸ್ತಾಪಿಸುತ್ತಾರೆ’ ಎಂದೂ ಹೇಳಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.