ADVERTISEMENT

‘ಅಪರಾಧ ಸಾಬೀತಿಗೂ ಮುನ್ನ ಶಾಸಕರು ಚಲಾಯಿಸಿದ ಮತ ಅಮಾನ್ಯವಲ್ಲ‘

ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 18 ಡಿಸೆಂಬರ್ 2020, 16:27 IST
Last Updated 18 ಡಿಸೆಂಬರ್ 2020, 16:27 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ‘ಶಾಸಕರೊಬ್ಬರು ತಮ್ಮ ಮೇಲಿನ ಕ್ರಿಮಿನಲ್‌ ಅಪರಾಧ ಸಾಬೀತಾಗುವ ಮುನ್ನ ಚಲಾಯಿಸಿದ ಮತವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ. ತಪ್ಪಿತಸ್ಥ ಎಂಬುದು ದೃಢವಾಗುವವರೆಗೂ ಆತನನ್ನು ನಿರಪರಾಧಿ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕೂ ಮುನ್ನ ಅನರ್ಹಗೊಳಿಸಿದರೆ ಆತನ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗುತ್ತದೆ’ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

2018ರಲ್ಲಿ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಅಮಿತ್‌ ಕುಮಾರ್‌ ಮಹತೊ ಅವರು ಮತ ಚಲಾಯಿಸಿದ ಬಳಿಕ ಅವರ ಮೇಲಿನ ಆರೋಪ ಸಾಬೀತಾಗಿತ್ತು. ಅವರು ಕಾಂಗ್ರೆಸ್‌ ಅಭ್ಯರ್ಥಿ ಧೀರಜ್‌ ಪ್ರಸಾದ್‌ ಸಾಹು ಪರ ಮತ ಚಲಾಯಿಸಿದ್ದರು. ಚುನಾವಣೆಯಲ್ಲಿ ಸಾಹು ಗೆಲುವು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ ಪ್ರದೀಪ್‌ಕುಮಾರ್‌ ಸೊಂಥಾಲಿಯಾ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಜಾರ್ಖಂಡ್‌ ಹೈಕೋರ್ಟ್‌ ತಿರಸ್ಕರಿಸಿತ್ತು. ಇದರ ವಿರುದ್ಧ ಸೊಂಥಾಲಿಯಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ತ್ರಿ ಸದಸ್ಯ ಪೀಠವು ಇದರ ವಿಚಾರಣೆ ನಡೆಸಿತು.

‘ಮಹತೊ ಅವರು 2018 ಮಾರ್ಚ್‌ 23ರ ಬೆಳಿಗ್ಗೆ 9.15ಕ್ಕೆ ಮತ ಚಲಾಯಿಸಿದ್ದರು. ಅದೇ ದಿನ ಮಧ್ಯಾಹ್ನ 2.30ಕ್ಕೆ ಅವರಿಗೆ ಶಿಕ್ಷೆಯಾಗಿತ್ತು. ವಿಚಾರಣಾಧೀನ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುವ ಮುನ್ನ ಅವರು ಮತದಾನ ಮಾಡಿದ್ದರಿಂದ ಅವರ ಮತವನ್ನು ಮಾನ್ಯ ಮಾಡಲಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ತಿಳಿಸಿತು.

ADVERTISEMENT

‘ವ್ಯಕ್ತಿಯ ಮೇಲಿನ ಆರೋಪ‍ ಸಾಬೀತಾಗುವವರೆಗೂ ಆತ ನಿರಪರಾಧಿ ಎಂಬುದು ಸಾಂವಿಧಾನಿಕ ಕಾನೂನಿನ ತತ್ವವಾಗಿದೆ. ಇದನ್ನು ಸುದೀರ್ಘ ಸಮಯದಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಇದು ಈ ಪ್ರಕರಣಕ್ಕೂ ಅನ್ವಯವಾಗುತ್ತದೆ’ ಎಂದು ಪೀಠವು 32 ಪುಟಗಳ ಆದೇಶದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.