ನವದೆಹಲಿ:ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ದೊರೆಯಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭಾನುವಾರ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ನಾಯ್ಡು ಅವರು, ಭಾರತೀಯ ಶಿಕ್ಷಣ ವ್ಯವಸ್ಥೆಯು 'ನಮ್ಮ ಸಂಸ್ಕೃತಿ' ಮೇಲೆಯೇ ಕೇಂದ್ರೀಕೃತವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.
'ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಿದರೆ, ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲರು. ಒಂದುವೇಳೆ ಬೇರೆ ಭಾಷೆಯಲ್ಲಿ ನೀಡುವುದಾದರೆ, ಮೊದಲು ಅವರು (ಮಕ್ಕಳು) ಆ ಭಾಷೆಯನ್ನೇ ಕಲಿಯಬೇಕಾಗುತ್ತದೆ. ನಂತರವಷ್ಟೇ ವಿಷಯ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ.
'ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯಲ್ಲಿ ಪ್ರೌಢಿಮೆ ಹೊಂದಿರಬೇಕು. ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕು' ಎಂದೂ ಹೇಳಿದ್ದಾರೆ.
ಕಾನೂನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗದಿದ್ದರೆ ನ್ಯಾಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದರು. ಇದನ್ನು ಉಲ್ಲೇಖಿಸಿದ ನಾಯ್ಡು ಅವರು, 'ಪ್ರಧಾನಿ ಮೋದಿ ಅವರು, ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವುದರ ಅಗತ್ಯತೆಯ ಬಗ್ಗೆ ನಿನ್ನೆ (ಏ.30) ಮಾತನಾಡಿದ್ದಾರೆ. ನ್ಯಾಯಾಲಯಗಳಷ್ಟೇ ಏಕೆ, ಇದು ಎಲ್ಲೆಡೆ ಜಾರಿಯಾಗಬೇಕು' ಎಂದು ಒತ್ತಿಹೇಳಿದ್ದಾರೆ.
ವಿವಿಯ ಕುಲಪತಿಯೂ ಆಗಿರುವ ವೆಂಕಯ್ಯನಾಯ್ಡು ಅವರು ಮುಖ್ಯ ಅತಿಥಿಗಳಾಗಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿವಿಯ ಶತಮಾನೋತ್ಸವದ ಸ್ಮರಣಾರ್ಥ ನೂರು ರೂಪಾಯಿ ನಾಣ್ಯ, ಅಂಚೆಚೀಟಿ ಹಾಗೂ ಶತಮಾನೋತ್ಸವ ಸಂಪುಟ ಬಿಡುಗಡೆ ಮಾಡಲಾಯಿತು.
ಇವನ್ನೂ ಓದಿ
*ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ: ಯೋಗರಾಜ್ ಭಟ್ ಸ್ಪಷ್ಟನೆ
*ನೋಡಿ: ಟ್ವೀಟ್ ಕಿಚ್ಚು- ಕಿಚ್ಚ ಸುದೀಪ್ V/S ಅಜಯ್ ದೇವಗನ್
*ದಕ್ಷಿಣ ಭಾರತದ ನಟರ ಬಗ್ಗೆ ಉತ್ತರದವರಿಗೆ ಅಸೂಯೆ, ಭಯ ಇದೆ: ರಾಮ್ ಗೋಪಾಲ್ ವರ್ಮಾ
*ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ
*ದಕ್ಷಿಣದ ಸಿನಿಮಾಗಳನ್ನು ಕಂಡು ಬಾಲಿವುಡ್ನವರು ಹೆದರಿದ್ದಾರೆ: ಮನೋಜ್ ಬಾಜಪೇಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.